ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ದರದಲ್ಲಿ ಔಷಧಿ ದೊರೆಯಬೇಕು. ರೋಗಿಗಳ ಮೇಲಿನ ಆರ್ಥಿಕ ಹೊರೆ ತಗ್ಗಿಸಬೇಕು ಎಂಬ ಆಶಯದೊಂದಿಗೆ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (ಎನ್ಪಿಪಿಎ) ಕ್ಯಾನ್ಸರ್ ನಿರೋಧಕ 9 ಔಷಧಗಳ ದರವನ್ನು ಶೇ 87ರಷ್ಟು ಇಳಿಸಿದೆ.
ಇದಕ್ಕೂ ಮೊದಲು ಕೇಂದ್ರ ಸರ್ಕಾರ, ಕ್ಯಾನ್ಸರ್ ನಿರೋಧಕ 42 ಔಷಧಿಗಳ ಬೆಲೆಯಲ್ಲಿ ಶೇ 85ರಷ್ಟು ಕಡಿಮೆ ಮಾಡಿ ಶೇ 30ರಷ್ಟು ದರದಲ್ಲಿ ಲಭ್ಯವಾಗುವಂತೆ ಮಾಡಿತ್ತು. ಪ್ರಸ್ತುತ 72 ವಿಧದ ಮತ್ತು 355 ಬ್ರಾಂಡ್‌ನ ಔಷಧಿಗಳು ಈ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ. ಭಾರತೀಯ ಫಾರ್ಮಾ ಮಾರುಕಟ್ಟೆಯ ಒಟ್ಟು 1.30 ಲಕ್ಷ ಕೋಟಿ ರೂ ವ್ಯವಹಾರದಲ್ಲಿ ₹ 3,500ರಿಂದ ₹ 4,000 ಕೋಟಿವರೆಗೂ ಕ್ಯಾನ್ಸರ್ ಔಷಧಿಗಳ ಪಾಲಿದೆ.
ಕಳೆದ ಕೆಲವು ವರ್ಷಗಳಿಂದ ದೇಶಿಯ ಕ್ಯಾನ್ಸರ್ ನಿರೋಧಕ ಔಷಧಿಗಳ ಮಾರಾಟ ವಾರ್ಷಿಕ ಶೇ 20 ಪ್ರತಿಶತದಲ್ಲಿ ಬೆಳವಣಿಗೆ ಕಾಣುತ್ತಿದೆ. ಆದರೆ, ಜಾಗತಿಕ ಬೆಳವಣಿಗೆ ದರ ಇದರ ಅರ್ಧದಷ್ಟಿದೆ. ಈ ಔಷಧಗಳನ್ನು ತಯಾರಿಕಾ ದರಕ್ಕಿಂತ 7ರಿಂದ 8 ಪಟ್ಟು ಅಧಿಕ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಭಾರತದಲ್ಲಿ 2.2ರಿಂದ 2.5 ಮಿಲಿಯನ್ (22 ರಿಂದ 25 ಲಕ್ಷ) ಕ್ಯಾನ್ಸರ್ ಪೀಡಿತರಿದ್ದಾರೆ. ಪ್ರತಿ ವರ್ಷ 1.1 ಮಿಲಿಯನ್ ಜನರು ಕ್ಯಾನ್ಸರ್ಗೆ ಹೊಸದಾಗಿ ಸೇರ್ಪಡೆಯಾಗುತ್ತಿದ್ದಾರೆ. ಬಹುತೇಕ ಭಾರತೀಯರು ಆರೋಗ್ಯ ವಿಮೆಯಿಂದ ಹೊರಗುಳಿಯುತ್ತಿದ್ದಾರೆ. ಹೀಗಾಗಿ, ಇಂತಹ ಬೆಲೆ ಇಳಿಕೆ ಕ್ರಮವನ್ನು ಕೇಂದ್ರ ಜಾರಿಗೆ ತಂದಿದೆ.