ತಿರುವನಂತಪುರಂ: ಫೇಸ್ ಮಾಸ್ಕ್ಗಳನ್ನು ತಯಾರಿಸಿ ಕೊರೊನಾ ವೈರಸ್ ಹೋರಾಟಕ್ಕೆ ಕೈಜೋಡಿಸಿದ್ದ ಇಲ್ಲಿನ ಕೇಂದ್ರ ಕಾರಾಗೃಹದ ಕೈದಿಗಳು ಈಗ ವೈದ್ಯರು ಹಾಗೂ ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಅಗತ್ಯವಾದ ಗೌನ್ ಹಾಗೂ ಯುನಿಫಾರ್ಮ್ಗಳನ್ನು ತಯಾರಿಸಲು ಮುಂದಾಗಿದ್ದಾರೆ.
ಇಲ್ಲಿನ ಪೂಜಪ್ಪುರ ಬಳಿಯಿರುವ ಜೈಲಿಗೆ ಗೌನ್ ಹಾಗೂ ಯುನಿಫಾರ್ಮ್ ತಯಾರಿಸಿಕೊಡುವಂತೆ ಆರ್ಡರ್ ಬರಲಾರಂಭಿಸಿವೆ. ಶ್ರೀ ಚಿತ್ರ ತಿರುನಾಳ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ 500 ಗೌನ್ಗಳನ್ನು ತಕ್ಷಣ ತಯಾರಿಸಿಕೊಡುವಂತೆ ಹೇಳಿದೆ.
ಖ್ಯಾತ ನಟ ಹಾಗೂ ವಸ್ತ್ರ ವಿನ್ಯಾಸಕಾರ ಇಂದ್ರನ್ ಅವರು ಜೈಲು ಕೈದಿಗಳಿಗೆ ಈ ಮುನ್ನ ಮಾಸ್ಕ್ ತಯಾರಿಸುವುದನ್ನು ಕಲಿಸಿಕೊಟ್ಟಿದ್ದರು. ಈಗ ಮತ್ತೊಮ್ಮೆ ಜೈಲಿಗೆ ಭೇಟಿ ನೀಡಿದ ಅವರು, ಕೋವಿಡ್ ಚಿಕಿತ್ಸಕರಿಗೆ ಬೇಕಾದ ವೈಯಕ್ತಿಕ ಸುರಕ್ಷತಾ ಉಡುಪುಗಳನ್ನು ಸುಲಭವಾಗಿ ತಯಾರಿಸುವ ವಿಧಾನ ತಿಳಿಸಿಕೊಟ್ಟಿದ್ದಾರೆ. ಇಬ್ಬರು ಕೈದಿಗಳು ಗೌನ್ ಹೊಲಿಯುವ ಹಾಗೂ 23 ಜನ ಮಾಸ್ಕ್ ತಯಾರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
"ಶ್ರೀ ಚಿತ್ರ ತಿರುನಾಳ್ ಇನ್ಸ್ಟಿಟ್ಯೂಟ್ನವರೇ ಗೌನ್ಗೆ ಬೇಕಾದ ಕಾಟನ್ ಮತ್ತು ಟೆರಿಕಾಟ್ ಫ್ಯಾಬ್ರಿಕ್ ನೀಡಿದ್ದರಿಂದ ಹೊಲಿಗೆಗೆ ನಾವು ಅಲ್ಪ ಪ್ರಮಾಣದ ಶುಲ್ಕ ತೆಗೆದುಕೊಳ್ಳುತ್ತಿದ್ದೇವೆ." ಎಂದು ಪೂಜಪ್ಪುರ ಕೇಂದ್ರ ಕಾರಾಗೃಹದ ಸುಪರಿಂಟೆಂಡೆಂಟ್ ಬಿ. ಸುನೀಲಕುಮಾರ ತಿಳಿಸಿದ್ದಾರೆ.