ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಬುಧವಾರ ನಡೆಯಲಿರುವ ಸರ್ವಪಕ್ಷಗಳ ಸಭೆಯಿಂದ ಮಮತಾ ಬ್ಯಾನರ್ಜಿಯ ಬಳಿಕ ಇನ್ನೊಂದಷ್ಟು ನಾಯಕರು ಹಿಂದೆ ಸರಿದಿದ್ದಾರೆ.
'ಒಂದು ದೇಶ, ಒಂದು ಚುನಾವಣೆ' ಎನ್ನುವ ಹೊಸ ಯೋಜನೆಯನ್ನು ಜಾರಿಗೊಳಿಸುವ ಸಲುವಾಗಿ ಚರ್ಚಿಸಲು ಪ್ರಧಾನಿ ಮೋದಿ ಬುಧವಾರ ಸರ್ವಪಕ್ಷಗಳ ಸಭೆ ಆಯೋಜಿಸಿದ್ದಾರೆ. ಈಗಾಗಲೇ ಮಮತಾ ಬ್ಯಾನರ್ಜಿ ಸಭೆಗೆ ಗೈರಾಗುವುದಾಗಿ ಪತ್ರ ಮುಖೇನ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ಮೋದಿ ನೇತೃತ್ವದಲ್ಲಿ ನಾಳೆ ಸರ್ವಪಕ್ಷಗಳ ಸಭೆ: ಬರಲ್ಲ ಅಂದ್ರು ದೀದಿ!
ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿದು ಬಂದಿದೆ. ಪುತ್ರ ಕೆ.ಟಿ. ರಾಮರಾವ್ರನ್ನು ಕೆಸಿಆರ್ ತಮ್ಮ ಪ್ರತಿನಿಧಿಯಾಗಿ ಕಳುಹಿಸಿಕೊಡಲಿದ್ದಾರೆ. ಕೆಲದಿನಗಳ ಹಿಂದೆ ನಡೆದಿದ್ದ ನೀತಿ ಆಯೋಗದ ಸಭೆಗೂ ಕೆಸಿಆರ್ ಗೈರಾಗಿದ್ದರು. ಸರಣಿ ಸಭೆಗಳು ಇರುವುದರಿಂದ ಕೆಸಿಆರ್ ದೆಹಲಿಗೆ ತೆರಳಲಾಗುತ್ತಿಲ್ಲ ಎಂದು ಟಿಆರ್ಎಸ್ ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ಆಂಧ್ರ ಪ್ರದೇಶ ಮಾಜಿ ಸಿಎಂ ಹಾಗೂ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸಭೆಗೆ ಹಾಜರಾಗೋದು ಅನುಮಾನ ಎನ್ನುವ ಮಾತು ಪಕ್ಷದ ವಲಯದಿಂದ ಕೇಳಿಬರ್ತಿದೆ.