ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಮನವಿಗೆ ಸ್ಪಂದಿಸಿರುವ 30ಕ್ಕೂ ಹೆಚ್ಚು ಸಂಸದರು ತಮ್ಮ ಎಂಪಿಎಲ್ಎಡಿಎಸ್ ನಿಧಿಯಿಂದ 1 ಕೋಟಿ ರೂಪಾಯಿಯನ್ನು ಕೊರೊನಾ ಸೋಂಕು ತಡೆಗಟ್ಟುವ ಕ್ರಮಗಳಿಗೆ ಮೀಸಲಿಡಲು ಒಪ್ಪಿಗೆ ಸೂಚಿಸಿದ್ದಾರೆ.
ಎಲ್ಲಾ ಲೋಕಸಭಾ ಸದಸ್ಯರಿಗೆ ಶನಿವಾರ ಪತ್ರ ಬರೆದಿದ್ದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೋವಿಡ್-19 ಸೋಂಕಿನಿಂದ ದೇಶವು ಕಠಿಣ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ 'ಜನಪ್ರತಿನಿಧಿಗಳಾಗಿ ಜನರೊಂದಿಗೆ ನಿಲ್ಲುವುದು ನಮ್ಮ ಕರ್ತವ್ಯ' ಎಂದು ಹೇಳಿದರು.
ಕೋವಿಡ್-19 ಹರಡುವುದನ್ನು ತಡೆಯುವ ಸಲುವಾಗಿ ಸಂಸದರು ತಮ್ಮ ಸಂಸತ್ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ (ಎಂಪಿಎಎಲ್‍ಡಿಎಸ್) ನಿಧಿಯಿಂದ ಸ್ಥಳೀಯ ಅಧಿಕಾರಿಗಳಿಗೆ 1 ಕೋಟಿ ರೂಪಾಯಿ ಮೀಸಲಿಡುವಂತೆ ಕೇಳಿಕೊಂಡಿದ್ದರು.
ಸ್ಪೀಕರ್ ಮನವಿಗೆ ಸ್ಪಂದಿಸಿರುವ ಸುಮಾರು 35 ಸಂಸದರು ತಮ್ಮ ಎಂಪಿಎಎಲ್‍ಡಿಎಸ್ ನಿಧಿಯಿಂದ ಹಣವನ್ನು ಹಂಚಿಕೆ ಮಾಡಲು ಒಪ್ಪಿಗೆ ಪತ್ರಗಳನ್ನು ಕಳುಹಿಸಿದ್ದಾರೆ ಎಂದು ಲೋಕಸಭಾ ಸಚಿವಾಲಯದ ಮೂಲಗಳು ತಿಳಿಸಿವೆ.