ನವದೆಹಲಿ: ಸಂಸತ್ನಲ್ಲಿ ನಿನ್ನೆ ಮೂರು ಮಸೂದೆಗಳನ್ನು ಅಂಗೀಕರಿಸಿದ ಹಿನ್ನೆಲೆ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೂರು ಪ್ರಮುಖ ಕಾರ್ಮಿಕ ಸುಧಾರಣಾ ಮಸೂದೆಗಳನ್ನು ಬುಧವಾರ ಸಂಸತ್ ಅಂಗೀಕರಿಸಿದೆ. ಈ ಮಸೂದೆ ಬಗ್ಗೆ ಚಕಾರ ಎತ್ತಿರುವ ರಾಹುಲ್ ಗಾಂಧಿ, 300 ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳು ಸರ್ಕಾರದ ಅನುಮತಿಯಿಲ್ಲದೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲು ಈ ಮಸೂದೆ ಸಹಾಯಕವಾಗುತ್ತವೆ ಎಂದಿದ್ದಾರೆ.
ಈ ಮಸೂದೆಗಳ ಬಗ್ಗೆ ಟೀಕಿಸಿ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟ್ಟರ್ನಲ್ಲಿ ಅಕ್ರೋಶ ಹೊರಹಾಕಿದ್ದಾರೆ. ರೈತರಿಗೆ ಸಂಬಂಧಿಸಿದ ಮಸೂದೆಗಳನ್ನು ಜಾರಿ ಮಾಡಿದ ನಂತರ ಈಗ ಕೇಂದ್ರ ಸರ್ಕಾರವು ಕಾರ್ಮಿಕರನ್ನು ಗುರಿಯಾಗಿಸಿಕೊಂಡಿದೆ. ಬಡವರನ್ನು ಶೋಷಣೆ ಮಾಡುವುದು ಸ್ನೇಹಿತರನ್ನು ಪೋಷಿಸುವುದು ಮೋದಿ ಅವರ ನಿಯಮ ಎಂದು ರಾಹುಲ್ ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರವು ಉದ್ಯೋಗಿಗಳನ್ನು ತೆಗೆದುಹಾಕಲು ಸುಲಭವಾಗುವಂತಹ ಕಾನೂನನ್ನು ತಂದಿದೆ. ಹಾಗೆ ದೌರ್ಜನ್ಯ ಮಾಡುವುದನ್ನು ಸರ್ಕಾರ ಸುಲಭಗೊಳಿಸಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.