ಮುಂಬೈ: ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್(ಎಐಎಂಐಎಂ) ನಾಯಕ ವಾರಿಸ್ ಪಠಾಣ್ ತಮ್ಮ ಹೇಳಿಕೆಯನ್ನ ಹಿಂಪಡೆದಿದ್ದಾರೆ.
'ಯಾವುದೇ ಸಮುದಾಯದ ಭಾವನೆಗಳನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ. ನನ್ನ ಟೀಕೆಗಳು 'ಹಿಂದೂ ವಿರೋಧಿ' ಅಲ್ಲ, ನಾನು ನನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುತ್ತೇನೆ' ಎಂದು ಪಠಾಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಫೆ.15 ರಂದು ಕಲಬುರಗಿಯಲ್ಲಿ ನಡೆದಿದ್ದ ಸಿಎಎ ವಿರುದ್ಧದ ಪ್ರತಿಭನೆ ವೇಳೆ ಮಾತನಾಡಿದ್ದ ವಾರಿಸ್ ಪಠಾಣ್, 'ನಾವು ನಮ್ಮ ತಾಯಿ ಮತ್ತು ಸಹೋದರಿಯರನ್ನು ಪ್ರತಿಭಟನೆಗೆ ಕಳಿಸಿದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮ ಸಿಂಹಿಣಿಗಳು ಮಾತ್ರ ಹೊರಬಂದಿದ್ದು, ಈಗಾಗಲೇ ನೀವು ಬೆವರಲು ಶುರುವಾಗಿದ್ದೀರಿ. ನಾವೆಲ್ಲರೂ ಜತೆಯಾಗಿ ಬಂದರೆ ಏನಾಗಬಹುದು ಎಂದು ಊಹಿಸಿ. ನಾವು 15 ಕೋಟಿ ಇರಬಹುದು. ಆದರೆ, 100 ಕೋಟಿ ಜನರ ಮೇಲೆ ಪ್ರಾಬಲ್ಯ ಮೆರೆಯಬಹುದು ಎಂಬುದನ್ನು ನೆನಪಿಟ್ಟುಕೊಳ್ಳಿ' ಎಂದಿದ್ದರು.
ವಾರಿಸ್ ಪಠಾಣ್ ಹೇಳಿಕೆಗೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಕೂಡಲೆ ಎಐಎಂಐಎಂ ನಾಯಕನನ್ನು ಬಂಧಿಸಬೇಕು ಎಂದು ಕೆಲವರು ಆಗ್ರಹಿಸಿದ್ದರು.
'ಯಾವುದೇ ಜಾತಿ, ಲಿಂಗ ಅಥವಾ ಸಮುದಾಯ ಭಾವನೆಗಳನ್ನು ನೋಯಿಸುವ ಉದ್ದೇಶದಿಂದ ನಾನು ಹೇಳಿಲ್ಲ ಎಂದು ಪುನರುಚ್ಚರಿಸಲು ಬಯಸುತ್ತೇನೆ. ನಾನು ಹೆಮ್ಮೆಯ ಭಾರತೀಯ ಮತ್ತು ಈ ದೇಶದ ಬಹುತ್ವವನ್ನು ಗೌರವಿಸುತ್ತೇನೆ' ಎಂದು ಪಠಾಣ್ ಹೇಳಿದ್ದಾರೆ.