ಮುಂಬೈ: ದೇಶಾದ್ಯಂತ ಘೋಷಿಸಲಾದ ಲಾಕ್ಡೌನ್ ಏಪ್ರಿಲ್ 14ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15ರಿಂದ ಕೆಲಸಕ್ಕೆ ಹಾಜರಾಗುವಂತೆ ರೈಲ್ವೇ ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
ಏಪ್ರಿಲ್ 15ರಿಂದ ರಾಜಧಾನಿ, ಶತಾಬ್ಧಿ, ಡುರಾಂಟೊ ರೈಲುಗಳು ಹಾಗೂ ಕೆಲವು ಸ್ಥಳೀಯ ರೈಲುಗಳು ಪುನಾರಂಭವಾಗುವ ಸಾಧ್ಯತೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚಾಲಕರು, ಗಾರ್ಡ್ಗಳು, ಟಿಟಿಇ ಹಾಗು ಸುರಕ್ಷತಾ ಸಿಬ್ಬಂದಿ ಸೇರಿದಂತೆ ಇತರೆ ಕೆಲಸಗಾರರಿಗೆ ಡ್ಯೂಟಿಗೆ ಹಾಜರಾಗುವಂತೆ ನಿರ್ದೇಶನ ನೀಡಲಾಗಿದೆ ಎನ್ನಲಾಗಿದೆ.
ಆದರೆ ಕೇಂದ್ರ ಸರ್ಕಾರ ಇಲಾಖೆಗೆ ಗ್ರೀನ್ ಸಿಗ್ನಲ್ ನೀಡಿದ ಬಳಿಕ ದೇಶದಲ್ಲಿ ರೈಲು ಸಂಚಾರ ಆರಂಭಗೊಳ್ಳಲಿದೆ. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ರೈಲ್ವೇಯ ಎಲ್ಲಾ 17 ವಲಯಗಳಿಗೂ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಎರಡು ದಿನಗಳಲ್ಲಿ ರೈಲ್ವೇ ವಲಯಗಳಿಗೆ ಈ ಬಗ್ಗೆ ಸೂಚನೆ ನೀಡಲು ಉದ್ದೇಶಿಸಲಾಗಿದೆ.