ನವದೆಹಲಿ: ಫೆ.1ರ ಬಳಿಕ ಕೊರೊನಾ ಪೀಡಿತ ದೇಶಗಳಾದ ಚೀನಾ ಮತ್ತು ಹಾಂಕಾಂಗ್, ದಕ್ಷಿಣ ಕೊರಿಯಾ, ಜಪಾನ್, ಇಟಲಿ, ಥಾಯ್ಲೆಂಡ್, ಸಿಂಗಾಪುರ್, ಇರಾನ್, ಮಲೇಷ್ಯಾ, ಫ್ರಾನ್ಸ್, ಸ್ಪೇನ್ ಹಾಗೂ ಜರ್ಮನಿಗೆ ಪ್ರಯಾಣ ಬೆಳೆಸಿ ಭಾರತಕ್ಕೆ ಬಂದಿರುವವರು 14 ದಿನಗಳ ಕಾಲ ಸರ್ಕಾರದಿಂದ ನಡೆಸುವ ವೈದ್ಯಕೀಯ ತಪಾಸಣೆಗೆ ಸ್ವಯಂ-ನಿರ್ಬಂಧಿತವಾಗಿ ಒಳಪಡಬೇಕೆಂದು ಭಾರತ ಸರ್ಕಾರ ಸಲಹೆ ನೀಡಿದೆ.
ಈ ನಿಯಮ ಭಾರತೀಯ ಹಾಗೂ ವಿದೇಶಿ ಪ್ರಯಾಣಿಕರಿಬ್ಬರಿಗೂ ಅನ್ವಯವಾಗುತ್ತದೆ. ಹಾಗೆಯೇ ಅಂತಹ ವ್ಯಕ್ತಿಗಳು ಉದ್ಯೋಗಿಗಳಾಗಿದ್ದರೆ, ಅವರಿಗೆ ಮನೆಯಲ್ಲಿ ಕುಳಿತು ಕೆಲಸ ಮಾಡುವ ಸೌಲಭ್ಯವನ್ನು ಸಂಬಂಧಿಸಿದ ಕಂಪೆನಿ ಮಾಲೀಕರು ಒದಗಿಸಬೇಕು ಎಂದು ಕೂಡ ಸೂಚಿಸಲಾಗಿದೆ.
ಇನ್ನು ವೀಸಾ ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿದಂತೆ, ಈ ಹಿಂದೆ ನೀಡಲಾಗಿರುವ ಸೂಚನೆಗಳಲ್ಲದೆ, ಫ್ರಾನ್ಸ್, ಜರ್ಮನಿ ಮತ್ತು ಸ್ಪೇನ್‌ನ ಪ್ರಜೆಗಳಿಗೆ ಮಾರ್ಚ್ 11 ಅಥವಾ ಅದಕ್ಕೂ ಮೊದಲು ನೀಡಲಾದ ಇ-ವೀಸಾ ಸೇರಿದಂತೆ ಎಲ್ಲಾ ಸಾಮಾನ್ಯ ವೀಸಾಗಳನ್ನು ರದ್ದಗೊಳಿಸಲಾಗಿದೆ. ಒಂದು ವೇಳೆ ಅವರು ಇನ್ನೂ ಭಾರತ ಪ್ರವೇಶಿಸಿಲ್ಲದಿದ್ದರೂ ಅವರ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈಗಾಗಲೇ ಭಾರತದಲ್ಲಿರುವ ಎಲ್ಲಾ ವಿದೇಶಿಗರ ವೀಸಾಗಳು ಮಾನ್ಯವಾಗಿರುತ್ತವೆ. ತಮ್ಮ ವೀಸಾದ ವಿಸ್ತರಣೆ / ಪರಿವರ್ತನೆ ಅಥವಾ ಯಾವುದೇ ಇತರ ಸೇವೆಗಾಗಿ e-FRRO ಘಟಕದ ಮೂಲಕ ಹತ್ತಿರದ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೂಡ ಸಚಿವಾಲಯ ಸಲಹೆ ನೀಡಿದೆ.