ಲಕ್ನೋ: ದೇಶದಲ್ಲಿ ಕೋವಿಡ್-19 ಹರಡುವಲ್ಲಿ ತಬ್ಲಿಘಿ ಜಮಾತ್ ಕಾರಣ ಎಂದು ಹೇಳಿಕೆ ನೀಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸೋಂಕು ಇರುವುದು ಗೊತ್ತಿದ್ದರೂ ಬಚ್ಚಿಟ್ಟಿರುವುದು ಖಂಡನೀಯ ಎಂದಿದ್ದಾರೆ.
ಖಾಸಗಿ ಸುದ್ದಿವಾಹಿನಿವೊಂದರ ಜತೆ ಮಾತನಾಡಿರುವ ಯೋಗಿ ಆದಿತ್ಯನಾಥ್, ಸೋಂಕು ತಗುಲುವುದು ಅಪರಾಧವಲ್ಲ. ಆದರೆ ಸೋಂಕು ಹಬ್ಬಿರುವುದು ಗೊತ್ತಿದ್ದರೂ ಅದನ್ನು ಮುಚ್ಚಿಟ್ಟಿರುವುದು ದೊಡ್ಡ ಅಪರಾಧವಾಗಿದ್ದು, ಅದಕ್ಕೆ ಮುಖ್ಯ ಕಾರಣ ತಬ್ಲಿಘಿಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದ ವಿವಿಧ ಭಾಗ ಹಾಗೂ ಉತ್ತರಪ್ರದೇಶದಲ್ಲಿ ಸೋಂಕು ಹರಡಲು ತಬ್ಲಿಘಿ ನೇರ ಕಾರಣ, ರೋಗ ಮುಚ್ಚಿಟ್ಟು ಅಪರಾಧದಲ್ಲಿ ಅವರು ಭಾಗಿಯಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಮಾರ್ಚ್ನಲ್ಲಿ ದೆಹಲಿಯಲ್ಲಿ ನಡೆದಿದ್ದ ತಬ್ಲಿಘಿ ಸಭೆಯಲ್ಲಿ ಅನೇಕರು ಭಾಗಿಯಾಗಿದ್ದು, ಅವರಿಗೆ ಕೋವಿಡ್ ಸೋಂಕು ಹರಡಿತ್ತು.ಇದಾದ ಬಳಿಕ ಅನೇಕರು ತಮಗೆ ಸೋಂಕು ಇರುವ ಮಾಹಿತಿ ಬಚ್ಚಿಟ್ಟಿದ್ದರು ಎಂಬ ಮಾಹಿತಿ ಕೂಡ ಹೊರಬಿದ್ದಿತ್ತು.
ಕಳೆದ ಕೆಲ ದಿನಗಳ ಹಿಂದೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಯೋಗಿ ಆದಿತ್ಯನಾಥ್, ತಬ್ಲಿಘಿಯಲ್ಲಿ ಭಾಗಿಯಾಗಿ ವೈದ್ಯರಿಗೆ ಸಹಕಾರ ನೀಡದ ಸದಸ್ಯರನ್ನ ಹಿಡಿದು, ಮೊಬೈಲ್ ಫೋನ್ ವಶಕ್ಕೆ ತೆಗೆದುಕೊಂಡು, ಕರೆ ವಿವರ ಪರಿಶೀಲಿಸಬೇಕೆಂದು ಆದೇಶ ಹೊರಡಿಸಿದ್ದರು.