ನವದೆಹಲಿ : ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಹೋರಾಟಗಾರ ವರವರ ರಾವ್ ಅವರನ್ನು ಬಿಡುಗಡೆ ಮಾಡಲು ಮಧ್ಯಪ್ರವೇಶಿಸುವಂತೆ ಕೋರಿ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ರಾವ್ ಅವರ ಆರೋಗ್ಯ ಕ್ಷೀಣಿಸಿರುವ ಹಿನ್ನೆಲೆ ಅವರನ್ನು ಸರ್ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
"ಈ ದೇಶದಲ್ಲಿ, 81 ವರ್ಷ ವಯಸ್ಸಿನ ವ್ಯಕ್ತಿಯು ತನ್ನ ಅಪರಾಧವನ್ನು ತಿಳಿಯದೇ ವರ್ಷಗಳಿಂದ ಜೈಲಿನಲ್ಲಿದ್ದಾರೆ. ಈಗ ಅವರು ಮಾನಸಿಕವಾಗಿ ದಿಗ್ಭ್ರಮೆಗೊಂಡಿದ್ದಾರೆ, ವೈದ್ಯಕೀಯ ನೆರವು ಇಲ್ಲ, ಅವರ ಹೆಸರು ಕವಿ ವರವರ ರಾವ್. ದಯವಿಟ್ಟು ಅವರನ್ನು ಜೈಲಿನಿಂದ ಬಿಡುಗಡೆ ಮಾಡಿ. ಈ ವಯಸ್ಸಿನಲ್ಲಿ ಅವರು ವಿಶ್ವದ ಪ್ರಬಲ ರಾಷ್ಟ್ರಗಳಲ್ಲಿ ಒಂದಾದ ಭಾರತಕ್ಕೆ ಬೆದರಿಕೆಯಾಗಲು ಸಾಧ್ಯವಿಲ್ಲ. ದಯವಿಟ್ಟು ನೀವು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಅವರ ಜೀವ ಉಳಿಸಿ. ಇಲ್ಲದಿದ್ದರೆ, ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸುವುದಿಲ್ಲ" ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಚೌಧರಿ ಹೇಳಿದ್ದಾರೆ.
ನಕ್ಸಲ್‌ರೊಂದಿಗೆ ಸಂಪರ್ಕ ಹೊಂದಿದ್ದರು ಮತ್ತು ಹಿಂಸಾಚಾರಕ್ಕೆ ಪ್ರಚೋದಿಸಿದ್ದರು ಎಂಬ ಆರೋಪದಲ್ಲಿ ರಾವ್ ಮತ್ತು ಇತರ ಐದು ಜನರನ್ನು 2018 ರ ನವೆಂಬರ್‌ನಲ್ಲಿ ಬಂಧಿಸಲಾಯಿತು. 1 ಜನವರಿ 2018 ರಂದು ಪುಣೆ ಜಿಲ್ಲೆಯ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಒಬ್ಬರು ಮೃತಪಟ್ಟಿದ್ದರು ಮತ್ತು 10 ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದರು.
ಹೊಸ ವರ್ಷದ ದಿನದಂದು 200 ವರ್ಷಗಳ ಭೀಮಾ-ಕೋರೆಗಾಂವ್ ಯುದ್ಧದ ಸ್ಮರಣಾರ್ಥ ಕೆಲ ಜನರು ಕೇಸರಿ ಧ್ವಜಗಳೊಂದಿಗೆ ಹಳ್ಳಿಯ ಕಡೆಗೆ ಸಾಗುತ್ತಿರುವ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ, ಹಿಂಸಾಚಾರ ಭುಗಿಲೆದ್ದಿತ್ತು. ಘಟನೆಗೆ ಸಂಬಂಧಪಟ್ಟಂತೆ 162 ಜನರ ವಿರುದ್ಧ ಪೊಲೀಸರು 58 ಪ್ರಕರಣಗಳನ್ನು ದಾಖಲಿಸಿದ್ದಾರೆ.