ನವದೆಹಲಿ: ತೆಲುಗು ನಟಿ, ಮಾಜಿ ಸಂಸದೆ, ಸ್ಟಾರ್ ಪ್ರಚಾರಕಿ ವಿಜಯಶಾಂತಿ ಅವರನ್ನು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿಸಿಕೊಳ್ಳಲಾಗುವುದು ಎಂದು ಪಕ್ಷದ ಮುಖಂಡ ಜಿ ವಿವೇಕ್ ವೆಂಕಟಸ್ವಾಮಿ ತಿಳಿಸಿದ್ದಾರೆ.
ಬಿಜೆಪಿ ಸೇರುವ ಉದ್ದೇಶದಿಂದ ನಿನ್ನೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿಷನ್ ರೆಡ್ಡಿ ನೇತೃತ್ವದಲ್ಲಿ ವಿಜಯಶಾಂತಿ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಬಿಜೆಪಿ ಮೂಲಕ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ವಿಜಯಶಾಂತಿ ಅವರು ನಂತರ ಟಿಆರ್ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಗೆ ಸೇರಿಕೊಂಡರು. ಟಿಆರ್ಎಸ್ನಲ್ಲಿ ಹೆಚ್ಚು ದಿನ ಉಳಿಯದ ವಿಜಯಶಾಂತಿ ಬಳಿಕ ತೆಲಂಗಾಣ ರಚನೆಯ ಮೊದಲು ಅಂದ್ರೆ 2014 ರಲ್ಲಿ ಕಾಂಗ್ರೆಸ್ ಸೇರಿದ್ರು. ಇದೀಗ ಮತ್ತೆ ಕಾಂಗ್ರೆಸ್ ತೊರೆದು ಮರಳಿ ಮೂಲ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 48 ಸ್ಥಾನಗಳನ್ನು ಗೆದ್ದಿದೆ. ಈ ಹಿನ್ನೆಲೆ ಇದೀಗ ಮತ್ತೆ ಮಾತೃ ಪಕ್ಷಕ್ಕೆ ಮರಳಲು ಶಾಂತಿ ನಿರ್ಧರಿದ್ದಾರೆ ಎನ್ನಲಾಗಿದೆ.