ಮುಂಬೈ: ಲೋಕಸಭಾ ಚುನಾವಣೆ ನಡೆಯುವುದಕ್ಕೂ ಮುನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಮುಂಬೈನ ಉತ್ತರ ಕ್ಷೇತ್ರದಿಂದ 'ಕೈ' ಅಭ್ಯರ್ಥಿಯಾಗಿ ಕಣಕ್ಕಿಳಿದು, ಬಿಜೆಪಿಯ ಗೋಪಾಲ ಶೆಟ್ಟಿ ವಿರುದ್ಧ ಭಾರೀ ಅಂತರದ ಸೋಲು ಕಂಡಿದ್ದ ಬಾಲಿವುಡ್ ನಟಿ ಉರ್ಮಿಳಾ ಇದೀಗ ಪಕ್ಷವನ್ನ ತೊರೆದಿದ್ದಾರೆ.
ಬಾಲಿವುಡ್ನಲ್ಲಿ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿ ಮಿಂಚಿದ್ದ ನಟಿ ಉರ್ಮಿಳಾ ಮಾತೋಂಡ್ಕರ್ ಲೋಕಸಭೆ ಚುನಾವಣೆಗೂ ಮುಂಚಿತವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದರು. ತದನಂತರ ಮುಂಬೈನ ಉತ್ತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಗೋಪಾಲ್ ಶೆಟ್ಟಿ ವಿರುದ್ಧ ಸೋಲಿನ ರುಚಿ ಕಂಡಿದ್ದರು. ಆದರೆ, ಇದೀಗ ದಿಢೀರ್ ಆಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿನ ಒಳ ಜಗಳದಿಂದ ಬೇಸತ್ತು ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ ಅವರು, ತಾವು ತೆಗೆದುಕೊಳ್ಳುತ್ತಿರುವ ನಿರ್ಧಾರಕ್ಕೆ ಪಕ್ಷದಲ್ಲಿ ಯಾವುದೇ ರೀತಿಯ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದಿದ್ದಾರೆ. ಇದರ ಮಧ್ಯೆ ತಮ್ಮ ಮುಂದಿನ ನಡೆ ಬಗ್ಗೆ ಯಾವುದೇ ರೀತಿಯ ಮಾಹಿತಿ ಬಿಚ್ಚಿಟ್ಟಿಲ್ಲ. ಇದೇ ವರ್ಷದ ಕೊನೆಯಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣ, ಬಿಜೆಪಿ ಪಕ್ಷಕ್ಕೆ ಸೇರಿ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಅಚ್ಚರಿ ಪಡಬೇಕಾಗಿಲ್ಲ.