ಜಬಲ್ಪುರ (ಮಧ್ಯಪ್ರದೇಶ): ಕಾಂಗ್ರೆಸ್ ಮುಖಂಡ ಅಜಯ್ ಸಿಂಗ್ ಪುತ್ರ, ಬಾಲಿವುಡ್ ನಟ ಅರುಣೋದಯ ಸಿಂಗ್ ಹಾಗೂ ಆತನ ಪತ್ನಿ ವಿಚ್ಛೇದನ ಪ್ರಕರಣ ಮತ್ತಷ್ಟು ಕಗ್ಗಂಟಾಗಿದೆ. ಕುಟುಂಬ ನ್ಯಾಯಾಲಯದ ತೀರ್ಪಿನ ವಿರುದ್ಧ ಅರುಣೋದಯ ಸಿಂಗ್ ಪತ್ನಿ ಲೀ ಅನ್ನಿ ಎಲ್ಟನ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
2016ರಲ್ಲಿ ಕೆನಡಾ ಮೂಲದ ಹಾಗೂ ಗೋವಾದಲ್ಲಿ ಕೆಫೆ ನಡೆಸುತ್ತಿದ್ದ ಲೀ ಅನ್ನಿ ಎಲ್ಟನ್ ಅವರನ್ನು ಬಾಲಿವುಡ್ ನಟ ಅರುಣೋದಯ್ ಸಿಂಗ್ ವಿವಾಹವಾಗಿದ್ದರು. ಇದಾದ ಸುಮಾರು 3 ವರ್ಷಗಳ ನಂತರ ಅರುಣೋದಯ ಸಿಂಗ್ ಪತ್ನಿಯ ಮೇಲೆ ಮಾನಸಿಕ ಕಿರುಕುಳ ಆರೋಪ ಹೊರೆಸಿ 2019ರ ಸೆಪ್ಟೆಂಬರ್ 18ರಂದು ಭೋಪಾಲ್ನ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಕೆಲ ದಿನಗಳ ಹಿಂದೆ ಅರುಣೋದಯ ಸಿಂಗ್ ಪರವಾಗಿ ತೀರ್ಪು ಬಂದಿದ್ದು, ವಿಚ್ಛೇದನವನ್ನು ಕುಟುಂಬ ನ್ಯಾಯಾಲಯ ಅಂಗೀಕರಿಸಿತ್ತು. ನ್ಯಾಯಾಲಯದ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ ಲೀ ಅನ್ನಿ ಎಲ್ಟನ್ ಜಬಲ್ಪುರ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ.
ವಿಚ್ಛೇದನಕ್ಕೆ ಸಾಕು ನಾಯಿಗಳು ಕಾರಣವಾ..?
ಕೋರ್ಟ್ಗೆ ಒದಗಿಸಿದ ದಾಖಲೆಗಳ ಪ್ರಕಾರ ಅರುಣೋದಯ ಸಿಂಗ್ ವಿಚ್ಛೇದನಕ್ಕೆ ಸಾಕು ನಾಯಿಗಳು ಕಾರಣವೆಂದು ಹೇಳಲಾಗುತ್ತಿದೆ. ಅರುಣೋದಯ ಸಿಂಗ್ ತನ್ನ ಮನೆಯಲ್ಲಿ ನಾಯಿಯೊಂದನ್ನು ಸಾಕಿದ್ದರು. ಆಕೆಯ ಪತ್ನಿ ಕೂಡ ಲೀ ಅನ್ನಿ ಎಲ್ಟನ್ ತಾನೂ ಕೂಡ ಸಾಕು ನಾಯಿಯನ್ನ ಮನೆಗೆ ತಂದಿದ್ದಳು. ಈ ಎರಡೂ ನಾಯಿಗಳು ಪರಸ್ಪರ ಕಚ್ಚಾಡುತ್ತಿದ್ದು, ಈ ವೇಳೆ ಅರುಣೋದಯ ಸಿಂಗ್ ಹಾಗೂ ಆಕೆಯ ಪತ್ನಿಯೂ ಕೂಡ ಜಗಳವಾಡುತ್ತಿದ್ದರು. ಇದೇ ಇಬ್ಬರ ವಿಚ್ಛೇದನಕ್ಕೆ ಕಾರಣ ಎನ್ನಲಾಗುತ್ತಿದೆ.
ಈಗ ಮುಂದೇನು..?
ನ್ಯಾಯಾಲಯದ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ ಲೀ ಅನ್ನಿ ಎಲ್ಟನ್ ಜಬಲ್ಪುರ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು, ವಿಚ್ಛೇದನದ ವೇಳೆ ತಾನು ಕೆನಡಾದಲ್ಲಿದ್ದೆ ಎಂದು ವಾದಿಸಿದ್ದಾಳೆ. ಸೋಮವಾರ ವಿಚಾರಣೆ ನಡೆಸಲಾಗಿದ್ದು, 15 ದಿನಗಳ ನಂತರ ಮತ್ತೆ ವಿಚಾರಣೆ ನಡೆಯಲಿದೆ.