ಹರಿದ್ವಾರ: ಯೋಗ ಗುರು ಬಾಬಾ ರಾಮ್ದೇವ್ ಅವರ ಆಪ್ತ ಹಾಗೂ ಪತಂಜಲಿ ಸಂಸ್ಥೆಯ ಸಿಇಒ ಆಚಾರ್ಯ ಬಾಲಕೃಷ್ಣ ಅವರು ಹೃದಯಾಘಾತಕ್ಕೆ ಒಳಗಾಗಿದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಏಮ್ಸ್ಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆಯುರ್ವೇದ ಶಾಸ್ತ್ರದಲ್ಲಿ ಪಂಡಿತರಾಗಿರುವ ಬಾಲಕೃಷ್ಣ ಅವರು ಪತಂಜಲಿ ಸಂಸ್ಥೆಗಳನ್ನು ಹಲವಾರು ವರ್ಷಗಳಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಹಲವಾರು ಕಾಯಿಲೆಗಳಿಗೆ ಆಯುರ್ವೇದ ಮೂಲಕ ಚಿಕಿತ್ಸೆ ಹುಡುಕುವುದರಲ್ಲಿ ಪರಿಣತರಾಗಿರುವ ಬಾಲಕೃಷ್ಣ ಅವರು ಕೇವಲ ಒಂದು ರೂಪಾಯಿ ಸಂಬಳಕ್ಕೆ ಪತಂಜಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಆಚಾರ್ಯರು ಆಯುರ್ವೇದ ಕುರಿತು ಹಲವು ಗ್ರಂಥಗಳನ್ನು ಬರೆದಿದ್ದಾರೆ.