ಎರ್ನಾಕುಲಂ: ಕೇರಳದಲ್ಲಿ ನಡೆದ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳೊಂದಿಗೆ ಬೆಂಗಳೂರು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾದವರಿಗೆ ಸಂಬಂಧವಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಪಿ.ಎಸ್.ಸರಿತ್, ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಕೋರಿ ಇಡಿ ಅರ್ಜಿ ಸಲ್ಲಿಸಿತ್ತು. ಮಾದಕ ವಸ್ತು ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು ಚಿನ್ನದ ಕಳ್ಳಸಾಗಣೆಗೆ ಸಹಾಯ ಮಾಡಿದ್ದಾರೆ. ಈ ಬಗ್ಗೆ ಸುಮಾರು 20 ಜನರನ್ನು ಪ್ರಶ್ನಿಸಬೇಕು ಎಂದಿದೆ.

ಅಲ್ಲದೆ ಪ್ರಕರಣದ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಇಡಿ, ನ್ಯಾಯಾಲಯಕ್ಕೆ ತಿಳಿಸಿದೆ. ಆರೋಪಿಗಳಿಗೆ ಜಾಮೀನು ನೀಡುವುದು ತನಿಖೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುವ ಮೂಲಕ ನ್ಯಾಯಾಂಗ ಬಂಧನದ ಅವಧಿಯನ್ನು ಎರಡು ವಾರಗಳವರೆಗೆ ವಿಸ್ತರಿಸುವಂತೆ ಇಡಿ ಒತ್ತಾಯಿಸಿತ್ತು.
ಇಡಿ ಮನವಿ ಪರಿಗಣಿಸಿದ ಎರ್ನಾಕುಲಂ ಸೆಷನ್ಸ್ ನ್ಯಾಯಾಲಯವು, ಸ್ವಪ್ನಾ ಸುರೇಶ್, ಸರಿತ್ ಪಿ.ಎಸ್. ಮತ್ತು ಸಂದೀಪ್ ನಾಯರ್ ಅವರ ನ್ಯಾಯಾಂಗ ಬಂಧನವನ್ನು ಸೆ. 23ರವರೆಗೆ ವಿಸ್ತರಿಸಿದೆ.