ಶ್ರೀನಗರ: ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರಕ್ಕೆ ಇಂದಿಗೆ ಎರಡು ವರ್ಷಗಳು ಸಂದಿವೆ. ಆದ್ರೆ ಕೇಂದ್ರದ ಈ ಮಹತ್ವದ ನಿರ್ಧಾರದ ಬಳಿಕ ಕಾಶ್ಮೀರದಲ್ಲಿ ಹೇರಲಾದ ಲಾಕ್ಡೌನ್ನಿಂದಾಗಿ ಆರ್ಥಿಕ ಮತ್ತು ಅಭಿವೃದ್ಧಿ ಬಿಕ್ಕಟ್ಟುಗಳಿಗೆ ಕಾರಣವಾಗಿದೆ.
370ನೇ ವಿಧಿಯನ್ನು ರದ್ದುಗೊಳಿಸುವುದಕ್ಕಿಂತಲೂ ಮುಂಚೆ, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಸೂಚಕಗಳಾದ ಜನರ ಜೀವಿತಾವಧಿ, ಶಿಶು ಮರಣ ಪ್ರಮಾಣ, ಸಾಕ್ಷರತೆ ಮತ್ತು ಬಡತನದಿಂದ ಆರ್ಥಿಕ ಅಭಿವೃದ್ಧಿಯವರೆಗೆ ಉತ್ತಮವಾಗಿಯೇ ಇತ್ತು. ಅಂದರೆ ರಾಷ್ಟ್ರೀಯ ಸರಾಸರಿ ಹಾಗೂ ಭಾರತದ ಕೆಲ ಪ್ರಮುಖ ರಾಜ್ಯಗಳಿಂಗಿಂತ ಇಲ್ಲಿನ ಪ್ರಮಾಣ ಅಥವಾ ಅಂಕಿ-ಅಂಶಗಳು ಆರೋಗ್ಯಕರವಾಗಿತ್ತು.
ಮುಖ್ಯವಾಗಿ ಖಾಸಗಿ ವಲಯದ ಹೂಡಿಕೆಯ ಒಳಹರಿವಿನ ಕೊರತೆಯೇ ಸದ್ಯದ ಆತಂಕಕಾರಿ ವಿಷಯ. ಕೆಲ ವಿಶ್ಲೇಷಕರು ಹೇಳುವ ಪ್ರಕಾರ, 370 ನೇ ವಿಧಿಯ ಅಸ್ತಿತ್ವದಿಂದ ಕಾರಣದಿಂದಾಗಿ ಈ ಸಮಸ್ಯೆ ಏರ್ಪಟ್ಟಿಲ್ಲ. ಹಲವು ದಶಕಗಳ ಅನಿಶ್ಚಿತ ರಾಜಕೀಯ ಹಾಗೂ ಭದ್ರತಾ ಪರಿಸ್ಥಿತಿಯ ಕಾರಣದಿಂದಾಗಿ ಈ ಸಮಸ್ಯೆ ತಲೆದೋರಿದೆ ಎಂದು ವಿಶ್ಲೇಷಕರು ಹೇಳುತ್ತಾರೆ.
ವಿಧಿ ರದ್ದತಿಯ ಸಮಯದಲ್ಲಿ ಬಿಜೆಪಿ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು ತೀವ್ರವಾಗಿ ವಿರೋಧಿಸಿದ್ದವು. ಇದಾದ ಒಂದು ವರ್ಷದ ಬಳಿಕ ಅವರು 370ನೇ ವಿಧಿ ರದ್ದುಗೊಳಿಸಿರುವುದನ್ನು ಸಮರ್ಥಿಸಲು ಅಭಿವೃದ್ಧಿ ಕಾರ್ಯಗಳು ನಡೆದಿರುವ ಬಗ್ಗೆ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಒಂದು ವರ್ಷದ ಹಿಂದಿದ್ದ ವಿಶೇಷ ಸ್ಥಾನಮಾನ ಹಾಗೂ ಕಳೆದ ಆಗಸ್ಟ್ 5ರ ಪೂರ್ವದ ಸ್ಥಿತಿಯನ್ನು ಮರುಸ್ಥಾಪಿಸಲು ಒತ್ತಾಯಿಸುತ್ತಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರವು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಸೂಚಿಯನ್ನು ಈಡೇರಿಸಿದೆಯಷ್ಟೇ, ಯಾವುದೇ ಅಭಿವೃದ್ಧಿಯನ್ನು ಅಲ್ಲ ಎಂದು ಆರೋಪಿಸಿದೆ.
ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿಗೆ ಸಾಕ್ಷಿಯಾಗಲಿದೆ ಎಂದು ಬಿಜೆಪಿ ಹೇಳಿತ್ತು. ಆದರೆ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ, ನಾವು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕಾರ್ಯಸೂಚಿಯನ್ನು ಮಾತ್ರ ಈಡೇರಿಸುವುದನ್ನು ನೋಡಿದ್ದೇವೆ. ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರರಿಗೆ ಪುನರ್ವಸತಿ, ಭಾರತದಲ್ಲಿ ನಿವಾಸ ಪ್ರಮಾಣ ಪತ್ರಗಳನ್ನು ನೀಡಲಾಗಿದೆ. ಆದ್ರೆ ಇಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಆರ್ಥಿಕತೆ ಬಿದ್ದಿದೆ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದು ಶ್ರೀನಗರದ ಪಿಡಿಪಿ ಮುಖಂಡ ರೂಫ್ ದಾರ್ ಆರೋಪಿಸಿದ್ದಾರೆ.
ಕಳೆದ ಆಗಸ್ಟ್ 5ರ ನಂತರ ಈ ಭಾಗದಲ್ಲಿ ಹೇರಲಾದ ಸ್ಥಗಿತವು, ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಮತ್ತು ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಕಾರಣವಾಗಿದೆ. ಇದು ಕೋವಿಡ್-19 ಲಾಕ್‌ಡೌನ್‌ನಿಂದ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಆರ್ಥಿಕ ಮತ್ತು ಅಭಿವೃದ್ಧಿ ವಿಶ್ಲೇಷಕ ಇಜಾಝ್ ಅಯೂಬ್ ಹೇಳುತ್ತಾರೆ.
ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಗೆ 40-45 ಸಾವಿರ ಕೋಟಿ ನಷ್ಟವಾಗಿದೆ. ಇದರಿಂದಾಗಿ ಉದ್ಯೋಗ ನಷ್ಟ ಸಂಭವಿಸಿದೆ ಎಂದು ಅಯೂಬ್ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಆರ್ಥಿಕತೆಯು ಕುಂಠಿತಗೊಂಡಿದೆ. ಇಲ್ಲಿನ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) -20 ಆಗಿದೆ. ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರದ ಪ್ರಕಾರ ನಿರುದ್ಯೋಗ ದರವು ಶೇಕಡಾ 22 ಕ್ಕಿಂತ ಹೆಚ್ಚಾಗಿದೆ. ಯಾವುದೇ ರೀತಿಯ ಹೂಡಿಕೆ ಈ ಭಾಗಕ್ಕೆ ಬಂದಿಲ್ಲ ಅಯೂಬ್ ಆರೋಪಿಸಿದ್ದಾರೆ.
ಒಂದು ಪ್ರದೇಶದಲ್ಲಿ ಹೂಡಿಕೆಯಾಗಬೇಕಾದರೆ ರಾಜಕೀಯ ಸ್ಥಿರತೆ ಮತ್ತು ಮೂಲಸೌಕರ್ಯಗಳಿರಬೇಕು. 370 ನೇ ವಿಧಿಯನ್ನು ರದ್ದುಗೊಳಿಸುವುದರಿಂದ ರಾಜಕೀಯ ಸ್ಥಿರತೆ ಬರುವುದಿಲ್ಲ. ಹೀಗಾಗಿ ಆರ್ಥಿಕ ಸ್ಥಿರತೆಯೂ ಇಲ್ಲ, ಹೂಡಿಕೆಯೂ ಆಗುವುದಿಲ್ಲ ಎಂದು ಅವರು ಹೇಳಿದರು.