ನವದೆಹಲಿ: ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಎಎಪಿ ಶಾಸಕ ಇಮ್ರಾನ್ ಹುಸೇನ್ ಅವರು ಕೊರೊನಾ ವೈರಸ್ನಿಂದಾಗಿ ಲಾಕ್‌ಡೌನ್ ಘೋಷಣೆಯಾಗಿದ್ದರೂ ಸಹ ಇದನ್ನು ಲೆಕ್ಕಿಸದೆ ಲಾಕ್‌ಡೌನ್ ಉಲ್ಲಂಘಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಎಪಿ ಶಾಸಕ ಸೋಮವಾರ ಸಂಜೆ ದೆಹಲಿಯ ಕೊರೊನಾ ವೈರಸ್ ಹಾಟ್‌ಸ್ಪಾಟ್‌ಗಳಲ್ಲಿ ಒಂದಾದ ಸದರ್ ಬಜಾರ್ ಪ್ರದೇಶದಲ್ಲಿ ಲಾಕ್ಡೌನ್ನ ನಿಯಮ ಮೀರಿ ಸುಮಾರು 25 ಜನರ ಗುಂಪಿನೊಂದಿಗೆ ಮತ್ತು ಹಲವು ಕಾರುಗಳೊಂದಿಗೆ ತೆರಳುತ್ತಿದ್ದುದು ಕಂಡುಬಂದಿದೆ. ಆಗ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಅವರು, ಶಾಸಕ ಹುಸೇನ್ ನೇತೃತ್ವದ ಸಭೆಗೆ ಆಕ್ಷೇಪ ವ್ಯಕ್ತಪಡಿಸಿದರು.
ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಶಾಸಕರಿಗೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಕ್ಲಾಸ್ ತೆಗೆದುಕೊಂಡಿರುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್ ಆಗಿವೆ.
ಈ ಬಗ್ಗೆ ದೆಹಲಿ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಕಾನೂನು ಎಲ್ಲರಿಗೂ ಒಂದೇ. ಲಾಕ್‌ಡೌನ್ ಉಲ್ಲಂಘಿಸಿದವರು ಯಾರಾದರೂ ಸರಿಯೇ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ
ದೆಹಲಿಯಲ್ಲಿ ಸೋಮವಾರ 190 ಹೊಸ ಕೊರೊನಾ ವೈರಸ್ ಪ್ರಕರಣಗಳು ಸೇರಿದಂತೆ ಒಟ್ಟು 3,108 ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಈವರೆಗೆ 54 ಜನರು ಕೊರೊನಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.