ಪಣಜಿ: ಉಚಿತ ವಿದ್ಯುತ್ ನೀಡುವ ಮೂಲಕ ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುರುವಾರ ಹೇಳಿದ್ದಾರೆ.
ಇಲ್ಲಿ ನಡೆದ ಸರ್ಕಾರಿ ಸಮಾರಂಭವೊಂದರಲ್ಲಿ ಮಾತನಾಡಿದ ಸಾವಂತ್, ಆಪ್ ಪಕ್ಷ ಉಚಿತ ವಿದ್ಯುತ್ ನೀಡುವ ಭರವಸೆ ನೀಡುತ್ತಿದೆ. ಈ ಮೂಲಕ ರಾಜ್ಯದ ಜನರನ್ನು ಮರುಳು ಮಾಡಲು ಹೊರಟಿದೆ ಎಂದು ಆಪ್ ಪಕ್ಷದ ಘೋಷಣೆಗಳಿಗೆ ಕಿಡಿಕಾರಿದರು.
200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಎಎಪಿ ಭರವಸೆ ನೀಡಿದೆ. ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಈಗಾಗಲೇ ಗೋವಾದ ಜನರಿಗೆ ವಿವಿಧ ಸರ್ಕಾರಿ ಯೋಜನೆಗಳ ಮೂಲಕ ನೇರ ನಗದು ಹಣ ವರ್ಗಾವಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ.
ಕೇವಲ ಅಧಿಕಾರಕ್ಕಾಗಿ ಉಚಿತವಾಗಿ ವಿದ್ಯುತ್ ನೀಡಲಾಗುವುದು ಎಂದು ಹೇಳಿ ಜನರನ್ನು ಮರುಳು ಮಾಡುವುದು ಸುಲಭ. ಉಚಿತ ವಿದ್ಯುತ್ ನೀಡುವ ಬದಲಾಗಿ ನಾವು ಈಗಾಗಲೇ ರಾಜ್ಯದ ಜನರಿಗೆ ಹೆಚ್ಚಿನ ಹಣವನ್ನೇ ನೀಡಿದ್ದೇವೆ. ಒಂದು ವೇಳೆ ಆಪ್, ಉಚಿತ ವಿದ್ಯುತ್ ನೀಡಿದರೂ ಸ್ಥಳೀಯರಿಗೆ ಸಿಗುವುದಿಲ್ಲ. ಅದು ಕೇವಲ ಗೋವಾದಲ್ಲಿ ವಾಸಿಸುತ್ತಿರುವ ದೆಹಲಿ ನಿವಾಸಿಗಳಿಗೆ ಮಾತ್ರ ಸಿಗುತ್ತದೆ ಎಂದಿದ್ದಾರೆ.
ದೆಹಲಿ ಎಎಪಿ ಶಾಸಕ ರಾಘವ್ ಚಾಧಾ ಅವರು 2022ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಗೋವಾದಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಇಲ್ಲಿನ ನಿವಾಸಿಗರಿಗೆ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ. ಅವರ ಹೇಳಿಕೆಗೆ ಪ್ರಮೋದ್ ಸಾವಂತ್ ಪ್ರತಿಕ್ರಿಯೆ ನೀಡಿದ್ದಾರೆ.