ನವದೆಹಲಿ: 50 ಸಾವಿರಕ್ಕಿಂತಲೂ ಹೆಚ್ಚಿನ ನಗದು ವಹಿವಾಟಿಗೆ ಇನ್ಮುಂದೆ ಆಧಾರ್ ಕಾರ್ಡ್ ಬಳಕೆ ಮಾಡಬಹುದು ಎಂದು ಕೇಂದ್ರ ಸರ್ಕಾರಿ ಅಧಿಕಾರಿವೋರ್ವರು ಖಚಿತಪಡಿಸಿದ್ದಾರೆ.
ಬ್ಯಾಂಕ್ನಲ್ಲಿ 50 ಸಾವಿರಕ್ಕೂ ಅಧಿಕ ನಗದು ಹಣ ವರ್ಗಾವಣೆ ಮಾಡಲು ಅಥವಾ ವಿತ್ಡ್ರಾ ಮಾಡಿಕೊಳ್ಳುವ ವೇಳೆ ಪಾನ್ ಕಾರ್ಡ್ ಉಲ್ಲೇಖ ಕಡ್ಡಾಯವಾಗಿದ್ದು, ಇದೀಗ ಆಧಾರ್ ಕಾರ್ಡ್ ಬಳಕೆ ಮಾಡಬಹುದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಈಗಾಗಲೇ ಬಜೆಟ್ನಲ್ಲಿ ತೆರಿಗೆ ಪಾವತಿ ಮಾಡಲು ಪಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಬಳಕೆ ಮಾಡಬಹುದು ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ಈ ಮಾಹಿತಿ ಸಹ ಹೊರಬಿದ್ದಿದೆ. ದೇಶದಲ್ಲಿ ಇದೀಗ 22 ಕೋಟಿ ಪಾನ್ ಕಾರ್ಡ್ಗಳಿದ್ದು, 110 ಕೋಟಿಗೂ ಅಧಿಕ ಜನರು ಆಧಾರ್ ಕಾರ್ಡ್ ಹೊಂದಿದ್ದಾರೆ. ಹಣ ವರ್ಗಾವಣೆ ಮಾಡಲು ಮೊದಲು ಅವರು ಆಧಾರ್ ಕಾರ್ಡ್ ಬಳಸಬೇಕು. ತದನಂತರ ತಮ್ಮ ಪಾನ್ ಕಾರ್ಡ್ ಜನರೇಟ್ ಮಾಡಿಕೊಂಡು ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಬ್ಯಾಂಕ್ಗಳಿದ 50 ಸಾವಿರಕ್ಕಿಂತಲೂ ಅಧಿಕ ಮೌಲ್ಯದ ಹಣ ಠೇವಣಿ ಇಡಲು ಅಥವಾ ಹಣ ಹಿಂಪಡೆದುಕೊಳ್ಳಲು ಇದರ ಬಳಕೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ. ಆದರೆ ಹೋಟೆಲ್,ವಿದೇಶಿ ಪ್ರಯಾಣ ಬಿಲ್ಗಳಂತಹ ನಗದು ವಹಿವಾಟಿನ ವೇಳೆ ಪಾನ್ ಕಾರ್ಡ್ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
ಆಧಾರ್ ಕಾರ್ಡ್ ವ್ಯಕ್ತಿಯ ಬಯೋಮೆಟ್ರಿಕ್ ಡೇಟಾದಿಂದ ಕಾರ್ಯನಿರ್ವಹಿಸುವುದರಿಂದ ಜನರು ಕೆಲವೊಮ್ಮೆ ಬೇರೆಯವರ ಪಾನ್ ಸಂಖ್ಯೆ ಬಳಕೆ ಮಾಡಿ ಮೋಸ ಮಾಡುತ್ತಿದ್ದು, ಇದೀಗ ಇದು ತಪ್ಪುತ್ತದೆ ಎಂದು ತಿಳಿಸಿದ್ದಾರೆ.