ಅಲಿರಾಜ್‌ಪುರ(ಮಧ್ಯಪ್ರದೇಶ): ಅಜ್ಜಿ ಬದುಕಿದ್ದಾಗಲೇ ಅವರ ಖಾತೆಯನ್ನು ಮುಚ್ಚುವಂತೆ ಬ್ಯಾಂಕ್ನವರು ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ತನ್ನ ಅಜ್ಜಿಯನ್ನು ತಳ್ಳುಗಾಡಿಯಲ್ಲಿ ಬ್ಯಾಂಕ್ಗೆ ಕರೆದುಕೊಂಡು ಬಂದ ರಂಪ ಮಾಡಿರುವ ಘಟನೆ ಜಿಲ್ಲೆಯ ಖಟ್ಟಾಲಿ ಗ್ರಾಮದಲ್ಲಿ ನಡೆದಿದೆ.
ಈತ ತಾನೇ ಘಟನೆಯ ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಖಟ್ಟಾಲಿ ಗ್ರಾಮದಲ್ಲಿ, ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ವರ್ತನೆಯಿಂದ ಕೋಪಗೊಂಡ ಯುವಕನೊಬ್ಬ ಕಾಲು ಮುರಿದ ಅಜ್ಜಿಯನ್ನು ತಳ್ಳುಗಾಡಿಯಲ್ಲಿ ಬ್ಯಾಂಕಿಗೆ ಕರೆತಂದಿದ್ದ ಹಾಗೂ ತನ್ನ ಅಜ್ಜಿ ಬದುಕಿದ್ದಾಗಲೇ ವ್ಯವಸ್ಥಾಪಕರು ಖಾತೆ ಬಂದ್ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಅವರ ಹೆಸರಿನಲ್ಲಿ ಸಾಲ ನೀಡುತ್ತಿಲ್ಲ. ಅವರು ಬದುಕಿದ್ದಾಗಲೇ ಏಕೆ ಖಾತೆ ಮುಚ್ಚಬೇಕು?. ಏಕೆ ಖಾತೆಯನ್ನು ಬೇರೆಯವರ ಹೆಸರಿಗೆ ವರ್ಗಾಯಿಸಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಯುವಕನ ಆರೋಪ ಸಂಬಂಧಿಸಿದಂತೆ ಬ್ಯಾಂಕನವರು ಪ್ರತಿಕ್ರಿಯೆ ನೀಡಿದ್ದಾರೆ. ಯುವಕ ಸ್ವತಃ ತನ್ನ ಅಜ್ಜಿಯ ಖಾತೆಯಿಂದ ಹಣ ಪಾವತಿಗೆ ಬಯಸುತ್ತಿದ್ದ. ನಿಯಮದ ಪ್ರಕಾರ ಖಾತೆ ಹೊಂದಿರುವವರೇ ಇಲ್ಲಿಗೆ ಬರಬೇಕಾಗಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಇನ್ಯಾರದ್ದೋ ಹಣವನ್ನು ಇನ್ಯಾರದ್ದೋ ಕೈಯಲ್ಲಿ ಕೊಡುವುದು ಸೂಕ್ತವಲ್ಲ. ಅದು ಸೂಕ್ತ ವ್ಯಕ್ತಿಗೆ ಲಭಿಸದೆಯೂ ಇರಬಹುದು. ಹಾಗಾಗಿ ಆತ ನಮ್ಮ ಮೇಲೆ ಕೋಪಗೊಂಡು ಹೀಗೆ ರಂಪಾಟ ನಡೆಸಿದ್ದಾನೆ ಎಂದಿದ್ದಾರೆ.