ಭದ್ರಾದ್ರಿ ಕೊತಗುಡೆಮ್(ತೆಲಂಗಾಣ): ಟಿಕ್ಟಾಕ್ ವಿಡಿಯೋದಿಂದ ಅವಾಂತರಗಳೇ ಹೆಚ್ಚು, ಅದನ್ನ ನಿಷೇಧಿಸಬೇಕೆಂಬ ಕೂಗು ದೇಶಾದ್ಯಂತ ಕೇಳಿಬರುತ್ತಿದೆ. ಆದರೆ ತೆಲಂಗಾಣದಲ್ಲಿ 2 ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿಯು ಟಿಕ್ಟಾಕ್ ವಿಡಿಯೋದಿಂದ ತನ್ನ ಕುಟುಂಬಸ್ಥರನ್ನು ಸೇರಿದ್ದಾನೆ.
ಭದ್ರಾದ್ರಿ ಕೊತಗುಡೆಮ್ ಜಿಲ್ಲೆಯ ನಿವಾಸಿ ವೆಂಕಟೇಶ್ವರಲು ಅವರಿಗೆ ಮೂವರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳೆದ 2 ವರ್ಷಗಳ ಹಿಂದೆ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ತೆರಳಿದ್ದರು. ನಂತರ ಹಿಂದಿರುಗಿ ಬರಲಿಲ್ಲ. ಈ ಬಗ್ಗೆ ಕುಟುಂಬ ಸದಸ್ಯರು ಬರ್ಗಂಪುಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಂದಿನಿಂದ, ವೆಂಕಟೇಶ್ವರಲುಗಾಗಿ ಹುಡುಕಾಟ ನಡೆಯುತ್ತಿತ್ತು.
ಇತ್ತೀಚೆಗೆ ಯುವಕನೊಬ್ಬ ಟಿಕ್ಟಾಕ್ ವಿಡಿಯೋ ನೋಡುತ್ತಿರುವಾಗ ವೆಂಕಟೇಶ್ವರಲು ಅವರನ್ನು ಗಮನಿಸಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ. ಟಿಕ್ಟಾಕ್ ವಿಡಿಯೋ ಜಾಡು ಹಿಡಿದಾಗ ಆತ ಪಂಜಾಬ್ನಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡುಬಂದಿದೆ.
ತಂದೆ ಇರುವ ಸ್ಥಳ ಪತ್ತೆಹಚ್ಚಿದ ಮಗ ಅಧಿಕಾರಿಗಳಿಗೆ ಮಾಹಿತಿ ನೀಡಿ ತನ್ನ ತಂದೆಯನ್ನು ಕಳುಹಿಸುವಂತೆ ಮನವಿ ಮಾಡಿದ್ದಾನೆ. ವಿಶೇಷ ಅನುಮತಿಯೊಂದಿಗೆ ಪಂಜಾಬ್‌ಗೆ ತೆರಳಿ ಪೊಲೀಸರ ಸಹಾಯದಿಂದ ತನ್ನ ತಂದೆಯನ್ನು ಯುವಕ ಗ್ರಾಮಕ್ಕೆ ಕರೆತಂದಿದ್ದಾನೆ.