ಬೆಂಗಳೂರು/ಕೋಯಿಕ್ಕೋಡ್: 2010ರ ಮೇ 22ರಂದು ದಶಕದ ಹಿಂದೆ ಮಂಗಳೂರು ವಿಮಾನ ದುರಂತ ಸಂಭವಿಸಿ 158 ಮಂದಿ ಮೃತಪಟ್ಟಿದ್ದರು. ಇದೀಗ ಇದೇ ಮಾದರಿಯಲ್ಲಿ ಕೇರಳದ ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ
ದುಬೈನಿಂದ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಕರಿಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವಘಡಕ್ಕೆ ತುತ್ತಾಗಿದೆ. ಲ್ಯಾಂಡಿಂಗ್ ವೇಳೆ ರನ್‌ವೇನಿಂದ ಜಾರಿ ಕಣಿವೆಗೆ ಬಿದ್ದ ವಿಮಾನ ಎರಡು ಹೋಳಾಗಿದೆ.
ಈ ದುರ್ಘಟನೆಯಲ್ಲಿ ಪೈಲಟ್ ಸೇರಿ 14 ಮಂದಿ ಸಾವಿಗೀಡಾಗಿದ್ದಾರೆ. ಏರ್ ಇಂಡಿಯಾ ಐಎಕ್ಸ್ 1344 ವಿಮಾನವಾ, ಸಂಜೆ 7:45ರ ವೇಳೆ ಲ್ಯಾಂಡ್ ಆಗಿದ್ದು, ರನ್‌ವೇನಿಂದ ಜಾರಿ ಕಣಿವೆಗೆ ಬಿದ್ದಿದೆ. ವಿಮಾನದಲ್ಲಿ ಇಬ್ಬರು ಪೈಲಟ್, 4 ಮಂದಿ ಸಿಬ್ಬಂದಿ, 10 ಹಸುಗೂಸು ಸೇರಿ ಒಟ್ಟು 184 ಪ್ರಯಾಣಿಕರಿದ್ದರು.
ದಶಕದ ಹಿಂದೆ ಮಂಗಳೂರಲ್ಲಿ ನಡೆದದ್ದು ಏನು?
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಪತನ ದೇಶದಲ್ಲಿ ನಡೆದ ಅತಿ ದೊಡ್ಡ ವಿಮಾನ ದುರಂತವಾಗಿದೆ. 2010ರ ಮೇ 22ರಂದು ದುಬೈಯಿಂದ ಮಂಗಳೂರಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 6.15ಕ್ಕೆ ಲ್ಯಾಂಡಿಂಗ್ ಮಾಡಲಿದೆ ಅನ್ನುವಷ್ಟರಲ್ಲಿ ರನ್‌ವೇಯಿಂದ ಜಾರಿ ನಿಯಂತ್ರಣ ತಪ್ಪಿ ಶತಮಾನದ ದುರಂತ ಸಂಭವಿಸಿತ್ತು.
ರನ್‌ವೇಯಲ್ಲಿ ವಿಮಾನ ಇಳಿಯುತ್ತಿದ್ದಂತೆ ನಿಯಂತ್ರಣ ತಪ್ಪಿ ವಿಮಾನ ರನ್‌ವೇ ಬಿಟ್ಟು ಹೊರಕ್ಕೆ ಹೋಗಿ ನೇರವಾಗಿ ವಿಮಾನ ನಿಲ್ದಾಣದ ಆವರಣ ಗೋಡೆಯ ಫ್ಯಾನ್‌ಗೆ ಢಿಕ್ಕಿ ಹೊಡೆದು ಗುಡ್ಡೆಯಿಂದ ಕೆಳಗುರುಳಿತ್ತು. ಇದೇ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು. ರನ್‌ವೇಯಲ್ಲಿ ನಿಲ್ಲದೆ ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ, ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ಬಿತ್ತು. ಮುಖ್ಯ ಪೈಲಟ್‌ನ ನಿರ್ಲಕ್ಷ್ಯ, ಸಹ ಪೈಲಟ್‌ನ ಸಲಹೆ ಪಾಲಿಸದೆ ಇದ್ದದ್ದೇ ಈ ದುರ್ಘಟನೆಗೆ ಕಾರಣ ಎಂದು ಬಳಿಕ ತನಿಖೆಯಲ್ಲಿ ತಿಳಿದುಬಂತು.
ಈ ದುರಂತದಲ್ಲಿ ಪೈಲಟ್, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ಈ ದುರ್ಘಟನೆಯಲ್ಲಿ 8 ಮಂದಿ ಬದುಕುಳಿದಿದ್ದರು.
ಇಂದು ಕೇರಳದಲ್ಲಿ ನಡೆದದ್ದು ಏನು?
ದುಬೈನಿಂದ ಕರಿಪುರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಸಮಯದಲ್ಲಿ ವಿಮಾನ ಪೈಲಟ್ ನಿಯಂತ್ರಣ ತಪ್ಪಿ ರನ್‌ವೇಯಿಂದ ಜಾರಿದೆ. ಇಂದು ಸಂಜೆ 7:45ರ ವೇಳೆ ಏರ್ ಇಂಡಿಯಾದ ಎಕ್ಸ್ 1344 ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಭಾರೀ ಮಳೆಯ ಕಾರಣಕ್ಕೆ ರನ್‌ವೇಯಿಂದ ಜಾರಿ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದು ವಿಮಾನ ಎರಡು ಹೋಳಾಗಿದೆ. ವಿಮಾನದಲ್ಲಿ 184 ಪ್ರಯಾಣಿಕರು ಹಾಗೂ ಇಬ್ಬರು ಪೈಲಟ್ ಸೇರಿ 4 ಮಂದಿ ಸಿಬ್ಬಂದಿ ಇದ್ದರು. ಭಾರೀ ಮಳೆಯ ಕಾರಣಕ್ಕೆ ಪೈಲಟ್ ಲ್ಯಾಂಡಿಂಗ್ ಮಾಡುವಲ್ಲಿ ವಿಫಲವಾಗಿದ್ದೇ ಅಪಘಾತಕ್ಕೆ ಕಾರಣ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಧಿಕೃತ ಹೇಳಿಕೆ ನೀಡಿ ಸ್ಪಷ್ಟಪಡಿಸಿದೆ.