ಹೌದು, ಈ ತಿಂಡಿ ತಿನಿಸುಗಳ ಔಟ್‌ಲೆಟ್‌ಗಳಲ್ಲಿ ಅಡುಗೆ ಮಾಡುತ್ತಿದ್ದವರು, ಪರಿಚಾರಕರು ಹಾಗೂ ಇತರ ಕೆಲಸ ಮಾಡುವವರು ಈಗ ಕಾಣಿಸುತ್ತಲೇ ಇಲ್ಲ. ಇವರೆಲ್ಲರೂ ಬಾಂಗ್ಲಾದೇಶದ ಮುಸ್ಲಿಮರಾಗಿದ್ದರು. ಹಲವು ವರ್ಷಗಳಿಂದಲೂ ಇವರು ಈ ಬೀದಿ ಬದಿಯಲ್ಲಿನ ತಿನಿಸುಗಳ ಔಟ್‌ಲೆಟ್‌ಗಳಲ್ಲಿ ಕೆಲಸ ಮಾಡುತ್ತಿದ್ದರು. ಇವು ಈ ಭಾಗದಲ್ಲಿ ಅತ್ಯಂತ ಜನಪ್ರಿಯ ಮಾಂಸಹಾರಿ ಔಟ್‌ಲೆಟ್‌ಗಳಾಗಿದ್ದವು. ರಾಜ್ಯ ರಾಜಧಾನಿಯಲ್ಲಿ ಗುಂಪು ಹಿಂಸೆ ಮಾಡಿದ ಕಾರಣಕ್ಕೆ ಡಿಸೆಂಬರ್ 19-20 ರ ಸಮಯದಲ್ಲಿ ಪೊಲೀಸರು ಸುಮಾರು 40 ಕ್ಕೂ ಹೆಚ್ಚು ಇಂತಹ ಜನರನ್ನು ಬಂಧಿಸಿದ್ದಾರೆ.
ಹಿಂಸೆ ತಹಬದಿಗೆ ಬಂದ ನಂತರ ಈ ಕೃತ್ಯವನ್ನು ಎಸಗಿದವರು ಯಾರು ಎಂಬ ಕುರಿತು ತನಿಖೆ ಶುರುವಾಗಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಜ್ಯದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮಾಡುವ ಕುರಿತು ಒಳ ಸಂಚು ನಡೆದಿದೆ ಎಂಬ ಆರೋಪವನ್ನೂ ಮಾಡಿದ್ದಾರೆ. ಈವರೆಗೆ ಪೊಲೀಸರು ನಡೆಸಿದ ತನಿಖೆಗಳೆಲ್ಲದರಲ್ಲೂ ವಿಪರೀತ ಚಿಂತನೆಗಳನ್ನೇ ಹರಿಬಿಡಲಾಗಿದೆ.
ಆಡಳಿತ ವ್ಯವಸ್ಥೆ ಮತ್ತು ಗುಪ್ತಚರ ವ್ಯವಸ್ಥೆಯ ವೈಫಲ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸರು ತಮ್ಮದೇ ಆದ ಥಿಯರಿಗಳನ್ನು ರೂಪಿಸುವತ್ತ ಗಮನ ಹರಿಸುತ್ತಿರುವಂತಿದೆ. ಉತ್ತರಪ್ರದೇಶದಲ್ಲಿ ಕೋಮು ಸೌಹಾರ್ದ ಕೆದಕುವ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗಿತ್ತು ಎಂಬ ಕತೆಯನ್ನು ಅವರು ಕಟ್ಟುತ್ತಿರುವಂತಿದೆ. ಹಲವು ಕಡೆಗಳಲ್ಲಿ 40-50 ಜನರು ಗುಂಪು ಸೇರಿ ಕಲ್ಲು ತೂರಾಟ ನಡೆಸಲು ಆರಂಭಿಸಿದ್ದರು. ಕೆಲವು ಬಾರಿ ಇವರು ಮುಖವನ್ನೂ ಕೂಡ ಮುಚ್ಚಿಕೊಂಡಿದ್ದರು. ಇವರು ಸಾರ್ವಜನಿಕ ಆಸ್ತಿ-ಪಾಸ್ತಿಯ ಮೇಲೆ ದಾಳಿ ನಡೆಸಿದ್ದಲ್ಲದೇ, ಹಿಂಸಾಚಾರದಲ್ಲೂ ತೊಡಗಿಸಿಕೊಂಡಿದ್ದರು. ಇದು ಸಮಯ ಕಳೆದಂತೆ ಸಾಮೂಹಿಕ ಹಿಂಸಾಚಾರಕ್ಕೆ ಕಾರಣವೂ ಆಯಿತು.
ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಒ. ಪಿ. ಸಿಂಗ್ ಕೇಂದ್ರ ಗೃಹ ಸಚಿವಾಲಯಕ್ಕೆ ಸಚಿವಾಲಯಕ್ಕೆ ಪತ್ರ ಒಂದನ್ನು ಬರೆದಿದ್ದು, ಪಿ ಎಫ್ ಐ ಅನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ ಮತ್ತು ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಿಂಸಾಚಾರದ ಸೂತ್ರ ವಹಿಸಿತ್ತು ಎಂದು ದೃಢೀಕರಿಸಿದ್ದಾರೆ. ಈ ಸಂಸ್ಥೆ ದೆಹಲಿ ಮೂಲದ ತೀವ್ರಗಾಮಿ ಸಂಸ್ಥೆಯಾಗಿದೆ. ಪೊಲೀಸರು ಈಗಾಗಲೇ 23 ಪಿ ಎಫ್ ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಈ ಪೈಕಿ ಪಿ ಎಫ್ ಐ ರಾಜ್ಯಾಧ್ಯಕ್ಷ ವಸೀಮ್ ಅಹಮದ್ ಕೂಡ ಸೇರಿದ್ದಾರೆ. ಪೊಲೀಸರು ತಮ್ಮ ವಿರುದ್ಧ ಹೊರಿಸಿರುವ ಆರೋಪ ಸುಳ್ಳು ಎಂದು ಪಿ ಎಫ್ ಐ ಹೇಳಿಕೊಂಡಿದೆ.
ಉತ್ತರ ಪ್ರದೇಶದಲ್ಲಿ ಪಿ ಎಫ್ ಐ ಸುಮಾರು ಮೂರು ವರ್ಷಗಳಿಗಿಂತಲೂ ಹೆಚ್ಚಿನ ಸಮಯದಿಂದ ಸಕ್ರಿಯವಾಗಿತ್ತು ಎಂದು ತನಿಖೆಗಳು ಹೇಳುತ್ತವೆ. ಬಾಂಗ್ಲಾದೇಶದಿಂದ ರಾಜ್ಯಕ್ಕೆ ಆಗಮಿಸಿದ ಸುಮಾರು ಮೂರರಿಂದ ನಾಲ್ಕು ಲಕ್ಷ ಅಕ್ರಮ ವಲಸಿಗರ ಮಧ್ಯೆ ತನ್ನ ಅಸ್ತಿತ್ವವನ್ನು ಈ ಸಂಘಟನೆ ಬೆಳೆಸಿಕೊಳ್ಳುತ್ತಲೇ ಬಂದಿತ್ತು. ಪಿ ಎಫ್ ಐ ತನಗೆ ಬೇಕಾದ ಹಾಗೂ ಸೂಕ್ತವಾದ ಯುವಕರನ್ನು ಬಾಂಗ್ಲಾದೇಶಿ ವಲಸಿಗರಿಂದ ಆರಿಸಿಕೊಳ್ಳುತ್ತಿತ್ತು. ಅಷ್ಟೇ ಅಲ್ಲ, ಅದು ಜಿಲ್ಲಾ ಮಟ್ಟದಲ್ಲಿ ತಂಡಗಳನ್ನೂ ರಚಿಸಿತ್ತು. ಲಖನೌ, ಕಾನ್ಪುರ್, ವಾರಾಣಸಿ, ಬಿಜ್ನೋರ್, ಮೀರತ್, ಅಲಿಗಢ, ರಾಮ್‌ಪುರ, ಮುಜಾಫರನಗರದಲ್ಲಿ ಸಂಘಟನೆಯನ್ನು ಕಟ್ಟಿಕೊಂಡು ಗಲಭೆ ಎಬ್ಬಿಸಲು ಸಮಯಕ್ಕಾಗಿ ಕಾದು ಕುಳಿತಿತ್ತು. ಪೊಲೀಸರ ಈ ಹೇಳಿಕೆ ನಿಜವೆಂದೇ ನಾವು ನಂಬಿದರೂ, ಇದು ಇನ್ನೊಂದು ರೀತಿಯಲ್ಲಿ ಗುಪ್ತಚರ ದಳದ ವೈಫಲ್ಯವನ್ನು ನಮಗೆ ಎತ್ತಿ ತೋರಿಸುತ್ತದೆ. ಯಾಕೆಂದರೆ ಈ ಹಿಂದೆ ಯಾವುದೇ ಸಂದರ್ಭದಲ್ಲೂ ಪಿ ಎಫ್ ಐ ಅನ್ನು ಯಾವುದೇ ಘಟನೆಗಳಲ್ಲಿ ಉಲ್ಲೇಖಿಸಲಾಗಿರಲಿಲ್ಲ.
ಪೊಲೀಸರು ಹೇಳುವ ಪ್ರಕಾರ ದುಷ್ಕರ್ಮಿಗಳು ಗಲಭೆ ಮಾಡುವಾಗ ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು. ಇದು ಸಿಸಿಟಿವಿ ದೃಶ್ಯಾವಳಿಗಳಲ್ಲೂ ಕಂಡುಬಂದಿದೆ. ಅಷ್ಟೇ ಅಲ್ಲ, ನ್ಯೂಸ್ ಚಾನೆಲ್‌ಗಳೂ ಕೂಡ ಈ ವಿಡಿಯೋಗಳನ್ನು ತೋರಿಸಿವೆ. ಆದರೆ ಇವರು ಯಾಕೆ ಹೀಗೆ ಮುಸುಕು ಧರಿಸಿ ದಾಳಿ ನಡೆಸಿದ್ದಾರೆ? ಬಹುತೇಕರು ಮುಸ್ಲಿಂ ಪ್ರತಿಭಟನಾಕಾರರು ಇವರಾಗಿದ್ದು, ಇವರಿಗೆ ಮುಸುಕು ಧರಿಸುವ ಅಗತ್ಯ ಖಂಡಿತವಾಗಿಯೂ ಇರಲಿಲ್ಲ. ಯಾಕೆಂದರೆ ಅವರು ತಮ್ಮ ಮುಖವನ್ನು ಮರೆಮಾಚಿ ಪ್ರತಿಭಟನೆ ಮಾಡಬೇಕಿರಲಿಲ್ಲ. ಹಾಗಾದರೆ ಯಾಕೆ ಅವರು ಮುಸುಕು ಧರಿಸಿದ್ದರು? ಇದಕ್ಕೆ ಒಂದು ಕಾರಣವೆಂದರೆ ಇವರೆಲ್ಲ ಬಾಂಗ್ಲಾದೇಶದಿಂದ ಆಗಮಿಸಿದವರು. ಇದೇ ಕಾರಣಕ್ಕೆ ಪೊಲೀಸರು ಇವರ ವಿರುದ್ಧ 14 ಐಪಿಸಿ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಅಂದರೆ ಇದು ದೇಶದ್ರೋಹ, ಕೊಲೆ ಪ್ರಯತ್ನ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಪ್ರಕರಣವಾಗಿರುತ್ತದೆ. ಆದರೆ ಇನ್ನೂ ಒಂದು ಅಂಶವನ್ನು ನಾವು ಇಲ್ಲಿ ಗಮನಿಸಬೇಕು. ಮುಸುಕು ಧರಿಸಿ ಉಗ್ರನ ರೀತಿ ಧ್ವಂಸ ಮಾಡುವ ವ್ಯಕ್ತಿಗಳು ತೀರಾ ಸಾಮಾನ್ಯ ಮನುಷ್ಯರಂತೆ ಬೀದಿ ಬದಿಯ ಸ್ಟಾಲ್‌ಗಳಲ್ಲಿ ವೇಟರ್ ಆಗಿ, ಪಾತ್ರೆ ತೊಳೆಯುವವರಾಗಿ ಕೆಲಸ ಮಾಡುತ್ತಿರುತ್ತಾರೆಯೇ?
ಇನ್ನೊಂದೆಡೆ ಹಿಂದೆಂದೂ ಮಾಡಿರದಂತಹ ವಿಶಿಷ್ಟ ಕ್ರಮವೊಂದನ್ನು ಪೊಲೀಸರು ಇದೇವೇಳೆ ಕೈಗೊಂಡಿದ್ದಾರೆ. ಧಂಗೆಕೋರರಿಂದ ಉಂಟಾದ ಆಸ್ತಿಪಾಸ್ತಿ ಹಾನಿಗೆ ಸಮಾನವಾದ ವೆಚ್ಚವನ್ನು ದಂಗೆ ಕೋರರಿಂದಲೇ ವಸೂಲಿ ಮಾಡುತ್ತಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಇಂಥದ್ದೊಂದು ಕೆಲಸ ನಡೆದಿರಲಿಲ್ಲ. ಗಲಭೆ ಉಂಟು ಮಾಡಿದವರಷ್ಟೇ ಅಲ್ಲ, ಪ್ರತಿಭಟನೆಗೆ ಕರೆ ನೀಡಿದವರಿಂದಲೂ ನಷ್ಟ ವಸೂಲಿ ಮಾಡಲಾಗುತ್ತಿದೆ. ಸಿ ಎಂ ಯೋಗಿ ಆದಿತ್ಯನಾಥ ಅವರು ಈಗಾಗಲೇ ಈ ಬಗ್ಗೆ ನಿರ್ದೇಶನ ನೀಡಿದ್ದಾರೆ. ಅದಕ್ಕೆ ಅನುಗುಣವಾಗಿ ಸುಮಾರು 1300 ಜನರಿಗೆ ಈಗಾಗಲೇ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ. ಇವರಿಂದ ಒಟ್ಟಾರೆ ಸುಮಾರು 300 ಕೋಟಿ ರೂ. ಮೌಲ್ಯದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಭರ್ತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. 2010 ರಲ್ಲಿ ಮಾಯಾವತಿ ಸರ್ಕಾರ ಆದೇಶ ನೀಡಿದ್ದ ನೋಟಿಸ್ ಆಧರಿಸಿ ಈ ನಿರ್ದೇಶನ ನೀಡಲಾಗಿದೆ. ಆಗ ಮಾಯಾವತಿ ಸರ್ಕಾರ ಈ ನೋಟಿಸ್ ನೀಡಿತ್ತಾದರೂ, ಇದನ್ನು ಜಾರಿಗೆ ತಂದಿರಲಿಲ್ಲ. ಆದರೆ ಯೋಗಿ ಸರ್ಕಾರ ಇದೇ ಆದೇಶವನ್ನು ತನ್ನ ಗುರಾಣಿಯ ರೀತಿ ಬಳಸಿಕೊಳ್ಳಲು ಆರಂಭಿಸಿದೆ.
ಮುಸ್ಲಿಮರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂಬ ದೂರುಗಳು ಕೂಡ ಕೇಳಿ ಬಂದಿವೆ. ಆದರೆ ಸರ್ಕಾರ ಈ ಬಗ್ಗೆ ಯಾವ ಕಾಳಜಿಯನ್ನೂ ವಹಿಸಿದಂತೆ ಕಾಣಿಸುತ್ತಿಲ್ಲ. 2022 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಹಿಂದು ಮತ ಬ್ಯಾಂಕ್ ಅನ್ನೇ ಸಿಎಂ ಯೋಗಿ ಆದಿತ್ಯನಾಥ ಅವರು ಅವಲಂಬಿಸಿಕೊಂಡಿದ್ದಾರೆ. ಹೀಗಾಗಿ ಅವರು ಈಗಲೇ ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಸಮಾಜದಲ್ಲಿ ಏಳುತ್ತಿರುವ ಮುಸ್ಲಿಂ ದ್ವೇಷದ ಬಗ್ಗೆ ಬಿಜೆಪಿ ಸರ್ಕಾರ ಯಾವುದೇ ಕಾಳಜಿ ವಹಿಸಿದಂತೆ ಕಾಣಿಸುತ್ತಿಲ್ಲ. ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಈ ಸಮುದಾಯ ಹೊಂದಿರುವ ಅವಿಶ್ವಾಸ ಎಂದೇ ಕೇಸರಿ ಪಡೆ ಪ್ರತಿಬಿಂಬಿಸುತ್ತಿದೆ.