ನವದೆಹಲಿ: ವಿವಿಧ ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಸಾರವಾಗಿ ಪೂರ್ವ ಲಡಾಕ್ ಪರಿಸ್ಥಿತಿಯನ್ನು ಶಾಂತಿಯುತವಾಗಿ ಬಗೆಹರಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿತ್ತು. ಆದರೆ ಈಗ ಪರಿಸ್ಥಿತಿ ಹಿಂಸಾತ್ಮಕ ತಿರುವು ಪಡೆದುಕೊಂಡಿದ್ದು, ಓರ್ವ ಸೇನಾಧಿಕಾರಿ ಸೇರಿ ಮೂವರು ಭಾರತೀಯ ಯೋಧರು ಬಲಿಯಾಗಿದ್ದಾರೆ.
ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಈ ಘರ್ಷಣೆಯಲ್ಲಿ ಚೀನಾದ ಸೈನಿಕರೂ ಮೃತಪಟ್ಟಿದ್ದಾರೆ ಎನ್ನುವುದನ್ನು ಚೀನಾ ಕೂಡಾ ಒಪ್ಪಿಕೊಂಡಿದೆ. ಹಾಗಂತ ಉಭಯ ದೇಶಗಳ ಕಾದಾಟ ಇದೇ ಮೊದಲೇನಲ್ಲ. 1962ರಲ್ಲೇ ಎರಡೂ ದೇಶಗಳ ಮಧ್ಯೆ ವೈಷಮ್ಯಕ್ಕೆ ನಾಂದಿ ಹಾಡಲಾಗಿದೆ.
ಭಾರತ-ಚೀನಾ ಸಂಘರ್ಷದ ಹಾದಿ..
1962- ಚೀನಾ ದಾಳಿ ನಡೆಸುತ್ತದೆ ಎಂದು ಭಾರತ ಎಂದೂ ಊಹೆ ಕೂಡ ಮಾಡಿರಲಿಲ್ಲ. ಆದರೆ 1962 ರ ಅಕ್ಟೋಬರ್ 20 ರಂದು ಭಾರತದ ಮೇಲೆ ದಾಳಿ ನಡೆಸಿಯೇ ಬಿಟ್ಟಿತು. 10,000-20,000 ಸೈನಿಕರ ಪಡೆಯೊಂದಿಗೆ ಭಾರತ ಹಾಗೂ 80,000 ಯೋಧರ ಪಡೆಯೊಂದಿಗಿನ ಚೀನಾ ನಡುವಿನ ಈ ಯುದ್ಧ ಒಂದು ತಿಂಗಳ ಕಾಲ ನಡೆದು ನವೆಂಬರ್ 21ರಂದು ಅಂತ್ಯಗೊಂಡಿತು. ಇದರಲ್ಲಿ ಭಾರತ ಸೋಲು ಅನುಭವಿಸಿತ್ತು. ಬಳಿಕ ಇದನ್ನು '1962ರ ಸೈನೋ-ಇಂಡಿಯನ್ ವಾರ್' ಎಂದೇ ಕರೆಯಲಾಯಿತು.
1967- 5 ವರ್ಷಗಳ ಬಳಿಕ ಸಿಕ್ಕಿಂ ಭೂ ವಿವಾದದ ವಿಚಾರವಾಗಿ ನಡೆದ ಸಂಘರ್ಷದಲ್ಲಿ ಪ್ರತ್ಯುತ್ತರ ನೀಡಿದ ಭಾರತ, 1967ರ ಯುದ್ಧದಲ್ಲಿ 300-400 ಚೀನಾದ ಸೈನಿಕರನ್ನು ಹೊಡೆದುರುಳಿಸಿತು. ಈ ಕದನದಲ್ಲಿ 80 ಭಾರತೀಯ ಯೋಧರು ಸಹ ಹುತಾತ್ಮರಾದರು.
1987- ಅರುಣಾಚಲ ಪ್ರದೇಶದಲ್ಲಿ 1987 ರಲ್ಲಿ ನಡೆದ ಸುಮ್ಡೋರಂಗ್ ಚು ಘಟನೆಯು ಭಾರತೀಯ ಸೇನೆ ಮತ್ತು ಚೀನಿ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡುವಿನ ಯುದ್ಧಕ್ಕೆ ನಾಂದಿ ಹಾಡಿತು. ಆದರೆ ಬಹಳ ಜಾಗರೂಕತೆಯಿಂದ ಹೆಜ್ಜೆ ಹಾಕಿದ ಅಂದಿನ ಪ್ರಧಾನಿ ರಾಜೀವ್ ಗಾಂಧಿ, ಚೀನಾದ ಅಧ್ಯಕ್ಷರೊಂದಿಗೆ ಶಾಂತಿಯುತ ಮಾತುಕತೆ ನಡಸಿ ಇದನ್ನು ಬಗೆಹರಿಸಿಕೊಂಡರು.
2013- ಚೀನಾದ ಮಿಲಿಟರಿ ಹೆಲಿಕಾಪ್ಟರ್‌ಗಳು 2013ರ ಏಪ್ರಿಲ್ನಲ್ಲಿ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ) ದಾಟಿ ಭಾರತ ಪ್ರವೇಶಿಸಿತ್ತು. ಎರಡೂ ದೇಶಗಳ ಸೇನಾ ಪಡೆ ಶಿಬಿರಗಳನ್ನು ಸ್ಥಾಪಿಸಿದ್ದವು. ಆದರೆ ಯುದ್ಧದ ನಿರ್ಧಾರವನ್ನು ಇಬ್ಬರೂ ಹಿಂತೆಗೆದುಕೊಂಡರು.
2014- ಗಡಿ ಗ್ರಾಮವಾದ ಡೆಮ್ಚೋಕ್ನಲ್ಲಿ ಭಾರತೀಯ ಕಾರ್ಮಿಕರು ಕಾಲುವೆ ನಿರ್ಮಿಸಲು ಪ್ರಾರಂಭಿಸಿದಾಗ, 2014ರ ಸೆಪ್ಟೆಂಬರ್‌ನಲ್ಲಿ, ಮತ್ತೆ ಭಾರತ ಮತ್ತು ಚೀನಾ ಗಡಿ ವಿವಾದ ಆರಂಭವಾಯಿತು. ತಮ್ಮ ದೇಶದ ಯೋಧರೊಂದಿಗೆ ಚೀನಾ ಪ್ರಜೆಗಳು ಇದರ ವಿರುದ್ಧ ಪ್ರತಿಭಟನೆ ನಡೆಸಿದರು. ಸುಮಾರು ಮೂರು ವಾರಗಳ ನಂತರ ಇದು ಶಾಂತರೂಪ ಪಡೆಯಿತು.
2015- ಸೆಪ್ಟೆಂಬರ್ 2015ರಲ್ಲಿ ಗಡಿ ಭಾಗದಲ್ಲಿ ಗಸ್ತು ತಿರುಗುವ ಪ್ರದೇಶದಲ್ಲಿ ಚೀನಿಯರು ನಿರ್ಮಿಸುತ್ತಿದ್ದ ವಿವಾದಿತ ಕಾವಲು ಗೋಪುರವನ್ನು ಭಾರತೀಯ ಪಡೆಗಳು ಧ್ವಂಸಗೊಳಿಸಿತು. ಉತ್ತರ ಲಡಾಖ್ನ ಪ್ರದೇಶವೊಂದರಲ್ಲಿ ಚೀನಿ ಮತ್ತು ಭಾರತೀಯ ಪಡೆಗಳು ಮುಖಾಮುಖಿಯಾದವು.
2017- ಭಾರತದಲ್ಲಿರುವ ಗಡಿ ಪ್ರದೇಶ ಡೋಕ್ಲಾಮ್ ಪ್ರದೇಶವು ತನ್ನದೆಂದು ಚೀನಾ 2017 ರಲ್ಲಿ ವಿವಾದಕ್ಕೆ ನಾಂದಿ ಹಾಡಿತ್ತು. ಸತತ 2 ತಿಂಗಳುಗಳ ಕಾಲ ಇದು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಿತ್ತು. ಬಳಿಕ ಉಭಯ ರಾಷ್ಟ್ರಗಳ ರಾಜತಾಂತ್ರಿಕ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಸೇನೆಯನ್ನು ಹಿಂತೆಗೆದುಕೊಂಡಿದ್ದವು.
2020 - ಭಾರತ-ಚೀನಾ ಗಡಿಯಲ್ಲಿನ ಯಾಂಗೊಂಗ್ ತ್ಸೋ ಸರೋವರದ ಬಳಿ 2020 ಮೇ 5 ರಂದು ಉಭಯ ರಾಷ್ಟ್ರಗಳ ಸೈನಿಕರ ನಡುವೆ ಮೊದಲ ಬಾರಿ ಘರ್ಷಣೆ ಉಂಟಾಗಿತ್ತು. ಯಾಂಗೊಂಗ್ ತ್ಸೋ ಚೀನಾದ ಟಿಬೆಟಿಯನ್ ಸ್ವಾಯತ್ತ ಪ್ರದೇಶಕ್ಕೆ ವ್ಯಾಪಿಸಿರುವ ಸರೋವರವಾಗಿದ್ದು, ಇದರ ಮೂಲಕ ಗಡಿ ನಿಯಂತ್ರಣ ರೇಖೆ ಹಾದುಹೋಗುತ್ತದೆ. ಇದೀಗ ಪೂರ್ವ ಲಡಾಖ್ನ ಎಲ್ಎಸಿ (ಲೈನ್ ಆಫ್ ಆಕ್ಚುವಲ್ ಕಂಟ್ರೋಲ್) ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಎರಡೂ ರಾಷ್ಟ್ರಗಳ ಸೈನಿಕರ ಬಲಿ ಕೂಡ ಆಗಿಹೋಗಿದೆ.