ಬಂದಾ(ಉತ್ತರಪ್ರದೇಶ): ಖಾಸಗಿ ಬಸ್ ಹಾಗೂ ಟ್ರಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿ, 15 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಬಂದಾದಲ್ಲಿ ನಡೆದಿದೆ.
ಘಟನೆ ನಡೆದ ವೇಳೆ ಬಸ್ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಇಂದು ಮಧ್ಯಾಹ್ನ ಟಿಂಡ್ವಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೈಮಿರಿ ಬಳಿ ಬಸ್ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಏಕಾಏಕಿಯಾಗಿ ಬಂದಿರುವ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಎಸ್ಪಿ ಗಣೇಶ್ ಪ್ರಸಾದ್ ತಿಳಿಸಿದ್ದಾರೆ.
ಬಸ್ ಬಂದಾದಿಂದ ಫತೇಪುರಕ್ಕೆ ತೆರಳುತ್ತಿತ್ತು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನ ವಿವಿಧ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.