ನವದೆಹಲಿ: ಎಂಟು ವರ್ಷಗಳ ಹಿಂದೆ ಡಿಸೆಂಬರ್ 16ರ ರಾತ್ರಿ ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ರಾಷ್ಟ್ರವ್ಯಾಪಿ ಪ್ರತಿಭಟಿಸುವ ಮೂಲಕ ತಮ್ಮ ಆಕ್ರೋಶವನ್ನು ಜನರು ಹೊರ ಹಾಕಿದ್ದರು. ಜನರ ಮನಸ್ಸಾಕ್ಷಿಯು ಬಹಳ ಸಮಯದ ನಂತರ ಜಾಗೃತಗೊಂಡಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಹಥ್ರಾಸ್ ಮತ್ತು ನಂತರದ ಅತ್ಯಾಚಾರ ಪ್ರಕರಣಗಳನ್ನು ನೋಡಿದಾಗ ಆ ಆಲೋಚನೆ ತಪ್ಪು ಎಂದು ಸಾಬೀತಾಗಿದೆ.
ತೀವ್ರ ನಿಗಾ ಘಟಕದಲ್ಲಿ 15 ದಿನಗಳ ಕಾಲ ಜೀವನ್ಮರಣದ ಜೊತೆ ಹೋರಾಡಿದ ಹಥ್ರಾಸ್ ಸಂತ್ರಸ್ತೆಯ ಅಂತ್ಯಕ್ರಿಯೆ ಒಂದು ತಮಾಷೆಯಾಗಿ ನಡೆಯಿತು. ನಮ್ಮ ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ನಾವು ಎಷ್ಟು ಗಂಭೀರವಾಗಿದ್ದೇವೆ ಎಂಬುದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋದಲ್ಲಿ (ಎನ್‌ಸಿಆರ್‌ಬಿ) ಸಂಗ್ರಹವಾಗಿರುವ ದತ್ತಾಂಶ ಸ್ಪಷ್ಟವಾಗಿ ಹೇಳುತ್ತಿದೆ.
ಉತ್ತರಪ್ರದೇಶದಲ್ಲೇ ಅತ್ಯಾಚಾರಗಳು ಹೆಚ್ಚು!
ಎನ್‌ಸಿಆರ್‌ಬಿ ಅಂಕಿ-ಅಂಶಗಳ ಪ್ರಕಾರ, 2019ರಲ್ಲಿ ಒಟ್ಟು 4,05,861 ಅಪರಾಧ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 32,033 ಅತ್ಯಾಚಾರ ಪ್ರಕರಣಗಳಿವೆ. ಅಂದರೆ ದೇಶದಲ್ಲಿ ಪ್ರತಿದಿನ ಸರಾಸರಿ 87 ಹೆಣ್ಣು ಮಕ್ಕಳು ಅತ್ಯಾಚಾರಕ್ಕೊಳಗಾಗುತ್ತಿದ್ದಾರೆ. ಈ ಪೈಕಿ ಉತ್ತರಪ್ರದೇಶದಲ್ಲಿ ಮಾತ್ರ 3,065 ಪ್ರಕರಣಗಳು ದಾಖಲಾಗಿದ್ದು, ಇದು ಒಟ್ಟು ಪ್ರಕರಣಗಳಲ್ಲಿ ಶೇಕಡಾ 10ರಷ್ಟಿದೆ.
ಈ ಅಂಕಿ-ಅಂಶಗಳು ಯುಪಿ ಪೊಲೀಸರು ರಾಜ್ಯದ ಮಹಿಳೆಯರನ್ನು ರಕ್ಷಿಸುವ ಬದಲು ಸಮಾಜದ ಕೆಟ್ಟ ಅಂಶಗಳಿಗೆ ರಕ್ಷಣೆ ನೀಡುವಲ್ಲಿ ಹೇಗೆ ನಿರತರಾಗಿದ್ದಾರೆ ಎಂಬುದಕ್ಕೆ ಪುರಾವೆಯಾಗಿವೆ.
ಅತ್ಯಾಚಾರ ಪಟ್ಟಿಯಲ್ಲಿ ರಾಜಸ್ಥಾನ ಎರಡನೇ ಸ್ಥಾನ!
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಪ್ರಕಾರ, 59,853 ಪ್ರಕರಣಗಳೊಂದಿಗೆ ಉತ್ತರಪ್ರದೇಶ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಮುಂಚೂಣಿಯಲ್ಲಿದೆ. ರಾಜಸ್ಥಾನದಲ್ಲಿ ಒಂದು ವರ್ಷದಲ್ಲಿ 41,550 ಅಪರಾಧ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ 37,144 ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ.
ರಾಜಸ್ಥಾನದಲ್ಲಿ ಅತಿ ಹೆಚ್ಚು 5,997 ಅತ್ಯಾಚಾರ ಪ್ರಕರಣಗಳು ಮತ್ತು ಮಧ್ಯಪ್ರದೇಶದಲ್ಲಿ 2,485 ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು-ಮೂರು ದಿನಗಳಲ್ಲೇ ರಾಜಸ್ಥಾನದಲ್ಲಿ 18 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ಪರಿಚಯಸ್ಥರಿಂದಲೇ ಅತ್ಯಾಚಾರ!
ಕಳೆದ ವರ್ಷ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಶೇಕಡಾ 7ರಷ್ಟು ಹೆಚ್ಚಳವಾಗಿದೆ ಎಂದು ಎನ್‌ಸಿಆರ್‌ಬಿ ವರದಿ ಹೇಳಿದೆ. 2017ರಲ್ಲಿ 3 ಲಕ್ಷ 59 ಸಾವಿರ 849 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಇದು 2018ರಲ್ಲಿ 3 ಲಕ್ಷ 78 ಸಾವಿರ 236ಕ್ಕೆ ಏರಿತ್ತು. 2019ರಲ್ಲಿ ಈ ಸಂಖ್ಯೆ 4 ಲಕ್ಷ 5 ಸಾವಿರ 861ಕ್ಕೆ ತಲುಪಿದೆ ಎಂದು ವರದಿ ಹೇಳಿದೆ.
ಗಮನಿಸಬೇಕಾದ ಅಂಶವೆಂದರೆ ಈ ಅಪರಾಧಗಳ ಶೇಕಡಾ 30.9 ಪ್ರಕರಣಗಳಲ್ಲಿ ಆರೋಪಿ ಸಂಬಂಧಿ ಅಥವಾ ಪರಿಚಯಸ್ಥರಾಗಿದ್ದಾರೆ. ದೆಹಲಿಯ ಸಿಎಟಿಯ ಮಹಿಳಾ ವಿಭಾಗದ ಅಧ್ಯಕ್ಷ ಪೂನಂ ಗುಪ್ತಾ ಇಂತಹ ಪ್ರಕರಣಗಳಲ್ಲಿ ರಾಜಕೀಯ ಮಾಡದಂತೆ ಮನವಿ ಮಾಡಿದ್ದಾರೆ.
ಕೊರೊನಾ ಅವಧಿಯಲ್ಲಿಯೂ ಅತ್ಯಾಚಾರಗಳು ಹೆಚ್ಚು!
ಈ ವರ್ಷದ ಮಾರ್ಚ್ 1ರಿಂದ ಸೆಪ್ಟೆಂಬರ್ 18ರವರೆಗೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ 13,244 ಅತ್ಯಾಚಾರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ದೂರುಗಳು ದಾಖಲಾಗಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸ್ಮೃತಿ ಇರಾನಿ ಸೆಪ್ಟೆಂಬರ್ 22ರಂದು ರಾಜ್ಯಸಭೆಗೆ ತಿಳಿಸಿದ್ದರು.
ಈ ಎಲ್ಲದರ ಹೊರತಾಗಿಯೂ ಪೊಲೀಸರು, ಆಡಳಿತ ಮತ್ತು ಸರ್ಕಾರಗಳ ನಡೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.