ಕೋಯಿಕೋಡ್: ತನ್ನ ಸಹೋದರಿ ಸೇರಿದಂತೆ ಐವರು ಬಾಲಕಿಯರನ್ನು ಬಂಧಿಸುವಂತೆ 8 ವರ್ಷದ ಬಾಲಕ ಪೊಲೀಸರ ಮೊರೆ ಹೋದ ಘಟನೆ ಕೇರಳದ ಕೋಯಿಕೋಡ್ನಲ್ಲಿ ನಡೆದಿದೆ.
ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ತನ್ನೊಂದಿಗೆ ಆಟವಾಡದಿದ್ದಕ್ಕೆ ಮತ್ತು ಬೆದರಿಕೆಯೊಡ್ಡಿದ ಕಾರಣಕ್ಕಾಗಿ ಎಂಟು ವರ್ಷದ ಉಮರ್ ನಿಧಾರ್ ಎಂಬ ಬಾಲಕನ ದೂರಿಗೆ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನಾನು ಹುಡುಗನಾಗಿರುವುದರಿಂದ ಅವರು ನನ್ನನ್ನು ಗೇಲಿ ಮಾಡುತ್ತಿದ್ದಾರೆ. ಅವರೊಂದಿಗೆ ಲುಡೋ, ಶಟಲ್, ಕಳ್ಳ-ಪೊಲೀಸ್ ಆಟ ಆಡಲು ನನಗೆ ಅವಕಾಶ ನೀಡುತ್ತಿಲ್ಲ ಎಂದು ಉಮರ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಇದಕ್ಕೂ ಮೊದಲು ನಿಧಾರ್ ತನ್ನ ತಂದೆಗೆ ಈ ಬಗ್ಗೆ ದೂರು ನೀಡಿದ್ದ. ಆಗ ಅವರು ಪೊಲೀಸರಿಗೆ ದೂರು ಕೊಡುವಂತೆ ತಮಾಷೆಯಾಗಿ ಹೇಳಿದ್ದಾರೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಬಾಲಕ, ಪೊಲೀಸರ ಬಳಿ ಬಂದು ಐವರು ಬಾಲಕಿಯರನ್ನು ಬಂಧಿಸುವಂತೆ ಒತ್ತಾಯಿಸಿದ್ದಾನೆ.
ಮೇ 10ರಂದು ಬೇರೊಂದು ದೂರಿನ ವಿಚಾರಣೆ ನಡೆಸಲು ಬಾಲಕನ ನೆರೆ ಹೊರೆಗೆ ಭೇಟಿ ನೀಡಿದಾಗ ಮೂರನೇ ತರಗತಿಯ ವಿದ್ಯಾರ್ಥಿ ನಿಧಾರ್, ಇಂಗ್ಲಿಷ್‌ನಲ್ಲಿ ಬರೆದ ದೂರನ್ನು ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಕೊಟ್ಟಿದ್ದಾನೆ.
ಆ ದಿನ ಸಂಜೆ ತಡ ಆಗಿದ್ದರಿಂದ ಪೊಲೀಸರಿಗೆ ಬಾಲಕನ ಸಮಸ್ಯೆ ಇತ್ಯರ್ಥಪಡಿಸಲು ಸಾಧ್ಯವಾಗರಲಿಲ್ಲ. ಮರು ದಿನ ಬಾಲಕನ ಮನೆಗೆ ಭೇಟಿ ನೀಡಿದ ಕಸ್ಬಾ ಠಾಣೆಯ ಪೊಲೀಸ್ ಅಧಿಕಾರಿ ಉಮೇಶ್ ಹಾಗೂ ಕೆ.ಟಿ.ನಿರಾಜ್ ಎಂಬುವವರು ಐವರು ಬಾಲಕಿಯರಿಗೆ ಕಿವಿಮಾತು ಹೇಳಿದ್ದಾರೆ.