ಹೈದರಾಬಾದ್: ಜಗತ್ತು ಎರಡು ಮಹಾಯುದ್ಧಗಳನ್ನು ಕಂಡಿದೆ. 1914ರಿಂದ 1918ರವರೆಗೆ ನಡೆದ ಮೊದಲ ಜಾಗತಿಕ ಸಮರ ಮಾನವನ ಇತಿಹಾಸದಲ್ಲಿ ನಡೆದ ಮೊದಲ ಘೋರ ಘಟನೆಯಾದ್ರೆ, 1939ರಿಂದ 1945ರವರೆಗೆ ಎರಡನೇ ಮಹಾಯುದ್ಧ ನಡೆದಿದೆ. ಮೊದಲ ಮಹಾಯುದ್ಧದಲ್ಲಿ ಅಪಾರ ಪ್ರಮಾಣದ ಪ್ರಾಣ ಹಾನಿಯಾಗಿದ್ದರೂ, ಎರಡನೇ ಮಹಾಯುದ್ಧದಲ್ಲಿ ವಿಜ್ಞಾನದ ಕೊಡುಗೆಗಳ ಪರಿಣಾಮ ಮನುಷ್ಯ ಇತಿಹಾಸ ಕಂಡರಿಯದ ಅನಾಹುತ ನಡೆದು ಹೋಗಿತ್ತು.
ಎರಡನೇಯ ಮಹಾಯುದ್ಧದಲ್ಲಿ ಜಗತ್ತಿನ ಅನೇಕ ದೇಶಗಳು ಒಳಗೊಂಡಿದ್ದವು. ಪ್ರಧಾನವಾಗಿ ಯೂರೋಪ್ ಮತ್ತು ಏಷ್ಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಸಮರದಲ್ಲಿ ಮಿತ್ರರಾಷ್ಟ್ರಗಳ ಗುಂಪು ಫ್ರಾನ್ಸ್, ರಷ್ಯಾ, ಇಂಗ್ಲೆಂಡ್ ಮತ್ತು ಅಮೆರಿಕ ಒಂದೆಡೆ ಇದ್ದರೆ ಜರ್ಮನಿ, ಇಟಲಿ ಮತ್ತು ಜಪಾನ್ ಮತ್ತೊಂದು ಕಡೆ ಇದ್ದವು. ಹಿಟ್ಲರನ ಜರ್ಮನಿ, ಮುಸ್ಸೊಲೋನಿಯ ಇಟಲಿ ಮತ್ತು ರಾಜ ಹಿರೋಹಿಟೋನ ಜಪಾನ್ ಶತ್ರು ರಾಷ್ಟ್ರಗಳ ಪಾಳಯದಲ್ಲಿದ್ದವು. 1939ರಿಂದ 1945ರವರೆಗೆ ನಡೆದ ಕದನದಲ್ಲಿ 6 ಕೋಟಿಗೂ ಹೆಚ್ಚು ಜನರು ಸಾವಿಗೀಡಾದರು ಅನ್ನೋದು ಒಂದು ಅಂದಾಜು.
ಇಷ್ಟಕ್ಕೂ ಯುದ್ಧ ಶುರುವಾಗಲು ಕಾರಣವೇನು?
1939: ಸೋವಿಯತ್ ಒಕ್ಕೂಟದ ವೇಳೆ ಮಾಡಿಕೊಂಡಿದ್ದ ಒಪ್ಪಂದದ ಉಲ್ಲಂಘನೆ ಹಾಗೂ ವಿದೇಶಾಂಗ ಮಂತ್ರಿ ಲಿಟ್ಟಿನಫ್ ರಾಜೀನಾಮೆ ನೀಡಿದ್ದು ಎರಡನೇ ಮಹಾಯುದ್ಧಕ್ಕೆ ಮುಖ್ಯ ಕಾರಣ. ಜರ್ಮನಿಯ ಹಿಟ್ಲರ್, ಪೊಲೆಂಡ್ ಮೇಲೆ ಪಶ್ಚಿಮದ ಮೂಲಕ ದಾಳಿ ಮಾಡುವುದರೊಂದಿಗೆ ಯುದ್ಧಕ್ಕೆ ನಾಂದಿಯಾಯ್ತು. ಇದಾದ ಎರಡು ದಿನಗಳ ಬಳಿಕ ಫ್ರಾನ್ಸ್ ಮತ್ತು ಬ್ರಿಟನ್‌ಗಳೆರಡೂ ಜರ್ಮನಿ ಮೇಲೆ ಯುದ್ಧ ಸಾರಿದವು. ಸೆಪ್ಟೆಂಬರ್ 17ರಂದು ಸೋವಿಯತ್ ಯೂನಿಯನ್ ಪಡೆಗಳು ಪೊಲೆಂಡ್ ಮೇಲೆ ಪೂರ್ವ ದಿಕ್ಕಿನಿಂದ ದಾಳಿ ಕೈಗೊಂಡಿತು.
ಯುದ್ಧದ ವೇಳೆ ಅಡಾಲ್ಫ್ ಹಿಟ್ಲರ್(ಜರ್ಮನಿ), ಬೆನಿಟೊ ಮುಸ್ಸೋಲೋನಿ(ಇಟಲಿ), ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್(ಅಮೆರಿಕ), ಹರ್ಮನ್ ಜಿಯೊರಿಂಗ್ (ಜರ್ಮನಿಯ ಪ್ರಮುಖ ಸೇನಾ ನಾಯಕ), ವಿನ್‌ಸ್ಟನ್ ಚರ್ಚಿಲ್(ಬ್ರಿಟನ್ ಪ್ರಧಾನಿ), ಜೊಸೆಫ್ ಸ್ಟಾಲಿನ್(ಯುಎಸ್‌ಎಸ್‌ಆರ್), ಹ್ಯಾರಿ ಟ್ರೂಮನ್(ಅಮೆರಿಕ) ಪ್ರಮುಖ ವ್ಯಕ್ತಿಗಳಾಗಿದ್ದರು.
1940: ಪೊಲೆಂಡ್ ಸೋಲು ಕಾಣುತ್ತಿದ್ದಂತೆ ಜರ್ಮನ್, ನಾರ್ವೆ ಮತ್ತು ಡೆನ್ಮಾರ್ಕ್ ಮೇಲೆ ಆಕ್ರಮಣ ಮಾಡಿದ್ದು, ಈ ವೇಳೆ ಫ್ರಾನ್ಸ್ ಜರ್ಮನ್ನ್ ಜೊತೆ ಕದನ ವಿರಾಮಕ್ಕೆ ಸಹಿ ಹಾಕಿತು. ಜೂನ್ 1940ರಲ್ಲಿ ಫ್ರಾನ್ಸ್ ಸೋಲಿನ ನಂತರ, ಬ್ರಿಟನ್‌ನ ಆಕ್ರಮಣ ಮುಂದುವರಿದು, ಗ್ರೇಟ್ ಬ್ರಿಟನ್ ಮೇಲೆ ವಾಯುದಾಳಿ ನಡೆಸುತ್ತದೆ. ಹಲವು ತಿಂಗಳ ಕಾಲ ಈ ವಾಯು ದಾಳಿ ಮುಂದುವರೆಯುತ್ತದೆ.
1941: ಸೋವಿಯತ್ ಒಕ್ಕೂಟದ ಮೇಲೆ ದಾಳಿ
ಜರ್ಮನ್ 1941ರಲ್ಲಿ ಸೋವಿಯತ್ ಒಕ್ಕೂಟದ ಮೇಲೆ ದಾಳಿ ನಡೆಸಲು ಮುಂದಾಗುತ್ತದೆ. ಸೋವಿಯತ್ ಯೂನಿಯನ್ ಮತ್ತು ಮಿತ್ರ ಪಡೆಗಳ ದಾಳಿಗೆ ತತ್ತರಿಸಿದ ಜರ್ಮನಿ ಸೋತು ಶರಣಾಯಿತು. ಬರ್ಲಿನ್ ನಗರವನ್ನು ಸೋವಿಯತ್ ಯೂನಿಯನ್ ಹಾಗು ಪೊಲೆಂಡ್ ಪಡೆಗಳು ತಮ್ಮ ತೆಕ್ಕೆಗೆ ತೆಗೆದುಕೊಂಡ ಪರಿಣಾಮ 1945 ಮೇ 8ರಂದು ಜರ್ಮನಿ ಬೇಷರತ್ತಾಗಿ ಸೋಲೊಪ್ಪಿಕೊಳ್ಳಲೇಬೇಕಾಯ್ತು. ಇದರೊಂದಿಗೆ ಈ ಭೀಕರ ಯುದ್ಧ ಮುಕ್ತಾಯಗೊಂಡಿತು.
ಜಪಾನ್‌ನಿಂದ ಪರ್ಲ್ ಹಾರ್ಬರ್ ಮೇಲೆ ದಾಳಿ:
ವಾಷಿಂಗ್ಟನ್ ಡಿ.ಸಿಯಲ್ಲಿರುವ ಜಪಾನಿನ ರಾಜತಾಂತ್ರಿಕರು ವಿದೇಶಾಂಗ ಕಾರ್ಯದರ್ಶಿ ಕಾರ್ಡೆಲ್ ಹಲ್ ಜತೆ ಮಾತುಕತೆ ನಡೆಸಿದ್ದ ವೇಳೆ ಪರ್ಲ್ ಹಾರ್ಬರ್‌ನಲ್ಲಿನ ನೌಕಾ ನೆಲೆಯ ಮೇಲೆ ಜಪಾನ್ ಸೇನೆ ಬಾಂಬ್ ದಾಳಿ ನಡೆಸಿತು. 1945 ಜುಲೈ 26ರಂದು ಪಾಟ್ಸ್‌ಡ್ಯಾಮ್ ಘೋಷಣೆ ಮಾಡಲಾಯಿತು. ಇದರನ್ವಯ ಜಪಾನ್‌ಗೆ ಶರಣಾಗಲು ಸೂಚಿಸಲಾಯಿತು. ಆದರೆ, ಜಪಾನ್ ಶರಣಾಗತಿಗೆ ನಿರಾಕರಿಸಿತು. ಪರ್ಲ್ ಹಾರ್ಬರ್ ಮೇಲೆ ದಾಳಿ ನಡೆಸಿ ರಣೋತ್ಸಾಹದ ನಗೆ ಬೀರಿದ್ದ ಜಪಾನ್‌ಗೆ ಸರಿಯಾದ ತಿರುಗೇಟು ನೀಡಲು ಅಮೆರಿಕ ಕಾಯುತ್ತಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡು ಅದು ಜಪಾನ್ ಪ್ರಮುಖ ನಗರಗಳಾದ ಹಿರೋಷಿಮಾ ಮತ್ತು ನಾಗಸಾಕಿಗಳ ಮೇಲೆ ಕ್ರಮವಾಗಿ ಆಗಸ್ಟ್ 6 ಮತ್ತು 9ರಂದು ಅಣುಬಾಂಬ್ ದಾಳಿ ನಡೆಸಿತು. ಅಲ್ಲಿಗೆ ಇಡೀ ಜಗತ್ತೇ ತತ್ತರಿಸಿ ಹೋಯಿತು. ಹಿಂದೆಂದೂ ಕಂಡರಿಯದಂಥ ಹಾನಿ ಸಂಭವಿಸಿತ್ತು.
ಜರ್ಮನಿ, ಇಟಲಿ, ಜಪಾನ್, ಸ್ಲೋವಾಕಿಯಾ, ಹಂಗೇರಿ, ರೊಮಾನಿಯಾ(ನವೆಂಬರ್, 1940ವರೆಗೆ) ಮತ್ತು ಬಲ್ಗೇರಿಯಾ(ಮಾರ್ಚ್, 1941ವರೆಗೆ) ಶತ್ರು ಪಡೆಯಲ್ಲಿದ್ದರೆ, ಬ್ರಿಟನ್, ಅಮೆರಿಕ, ರಷ್ಯಾ(ಯುಎಸ್‌ಎಸ್‌ಆರ್), ಫ್ರಾನ್ಸ್, ಆಸ್ಪ್ರೇಲಿಯಾ(ಕಾಮನ್ವೆಲ್ತ್ ರಾಷ್ಟ್ರ), ಬೆಲ್ಜಿಯಂ, ಬ್ರೆಜಿಲ್, ಕೆನಡಾ(ಕಾಮನ್ವೆಲ್ತ್ ರಾಷ್ಟ್ರ), ಚೀನಾ, ಜೆಕೊಸ್ಲೋವೇಕಿಯಾ, ಡೆನ್ಮಾರ್ಕ್, ಎಸ್ಟೋನಿಯಾ, ಗ್ರೀಸ್, ಇಂಡಿಯಾ(ಬ್ರಿಟನ್ ಸಾಮ್ರಾಜ್ಯದ ಅಧೀನ ರಾಷ್ಟ್ರ), ಲ್ಯಾವಿಯಾ, ಲಿಥುವೇನಿಯಾ, ಮಾಲ್ಟಾ, ನೆದರ್ಲೆಂಡ್, ನಾರ್ವೆ, ಪೊಲೆಂಡ್, ದಕ್ಷಿಣ ಆಫ್ರಿಕಾ, ಯುಗೋಸ್ಲೋವೇಯಾ ಹಾಗೂ ಇತರೆ ರಾಷ್ಟ್ರಗಳು ಮಿತ್ರ ರಾಷ್ಟ್ರದ ಭಾಗವಾಗಿದ್ದವು.
ಮೇ.7, 1945ರಲ್ಲಿ ಎರಡನೇ ಮಹಾಯುದ್ಧ ಸಂಪೂರ್ಣವಾಗಿ ಮುಕ್ತಾಯಗೊಂಡು ಸೋತು ಸುಣ್ಣವಾಗಿ ಜರ್ಮನಿ ಶರಣಾಗಿದ್ದರಿಂದ ಎರಡನೇ ಮಹಾಯುದ್ಧಕ್ಕೆ ತಿಲಾಂಜಲಿ ಹಾಡಲಾಯಿತು. ಹೀಗಾಗಿ ಮೇ. 8 ಯೂರೋಪ್ ದೇಶಗಳಲ್ಲಿ ವಿಶ್ವ ಯುದ್ಧದ ವಾರ್ಷಿಕೋತ್ಸವ ಆಚರಣೆ ಮಾಡಲಾಗುತ್ತದೆ.