ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ಬಾಧಿತರಲ್ಲಿ ಶೇ. 83ರಷ್ಟು ಜನ ಮಧ್ಯಮ (ಪ್ರಾಥಮಿಕವೂ ಅಲ್ಲ- ಗಂಭೀರವೂ ಅಲ್ಲ) ಗುಣ ಲಕ್ಷಣಗಳನ್ನು ಹೊಂದಿರುವವರಾಗಿದ್ದಾರೆ. ಅಲ್ಲದೆ ಸೋಂಕು ತಗುಲಿರುವವರಲ್ಲಿ ಶೇ. 75.3ರಷ್ಟು ಜನ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ದೇಶದಲ್ಲಿ ಕೊರೊನಾ ಸೋಂಕಿತರಲ್ಲಿ ಶೇ.14.4ರಷ್ಟು ಜನರು 0 ರಿಂದ 45 ವರ್ಷ ವಯಸ್ಸಿನವರು. ಶೇ. 10.3 ಜನರು 45 ರಿಂದ 60 ವಯಸ್ಸಿನವರು, ಶೇ.33.1 ಜನರು 60 ರಿಂದ 75 ವಯಸ್ಸಿನವರು ಹಾಗೂ ಶೇ. 42.2 ಜನರು 75 ವರ್ಷಕ್ಕಿಂತ ಮೇಲ್ಪಟ್ಟವರು ಇದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು, ಕೊರೊನಾಗೆ ಚಿಕಿತ್ಸೆ ನೀಡಲು ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್(ಹೆಚ್ಸಿಕ್ಯೂ) ಅಡ್ಡಪರಿಣಾಮಗಳ ಪ್ರತಿಕ್ರಿಯಿಸಿದ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಂವಹನ ರೋಗಗಳ ಹಿರಿಯ ವಿಜ್ಞಾನಿ ಡಾ.ರಾಮನ್ ಆರ್.ಗಂಗಖೇಡ್ಕರ್, ಅದರ ಬಗ್ಗೆ ಪ್ರಾಥಮಿಕ ಅಧ್ಯಯನ ನಡೆಸಲಾಗಿದೆ. ಪ್ರಾಯೋಗಿಕ ಅಧ್ಯಯನ ನಡೆಸಲಾಗಿಲ್ಲ. ಪ್ರಾಯೋಗಿಕ ಅಧ್ಯಯನ ನಡೆಸಲು ಇದುವರೆಗೂ ಸಕಾರಾತ್ಮಕ ಸಾಕ್ಷಿಗಳು ದೊರೆತಿಲ್ಲ ಎಂದಿದ್ದಾರೆ.