ನವದೆಹಲಿ: ಎಫ್ಐಆರ್ ದಾಖಲಾಗಿ ಸುಮಾರು ಎರಡೂವರೆ ತಿಂಗಳ ನಂತರ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಮೊದಲ ಬಾರಿಗೆ ಮನೆಯಿಂದ ಹೊರ ಬಂದು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಜಾಕೀರ್ ನಗರದಲ್ಲಿರುವ ತಮ್ಮ ಮನೆಯಿಂದ ಹೊರ ಬಂದಿರುವ ಸಾದ್ ಸಾರ್ವಜನಿಕವಾಗಿ ಕಾಣಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಾದ್ ಮನೆಯಿಂದ ಹೊರ ಬಂದಿರುವ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದ್ದು, ತಬ್ಲಿಘಿ ಜಮಾತ್ ಮುಖ್ಯಸ್ಥ ದೆಹಲಿಯಲ್ಲೇ ಇರುವುದು ದೃಢಪಟ್ಟಿದೆ.
ತಬ್ಲೀಘಿ ಮುಖ್ಯಸ್ಥ ಸಾದ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿ 75 ದಿನಗಳು ಕಳೆದರೂ ಈವರೆಗೂ ಅವರನ್ನ ಕರೆಸಿ ವಿಚಾರಣೆ ಮಾಡುವುದು ಮಾತ್ರ ಪೊಲೀಸರಿಂದ ಸಾಧ್ಯವಾಗಿಲ್ಲ. ಸಾದ್ನ ಕೋವಿಡ್-19 ಪರೀಕ್ಷಾ ವರದಿ ಕೈಸೇರಿದ ನಂತರವಷ್ಟೇ ಪೊಲೀಸರು ವಿಚಾರಣೆಗೆ ಕರೆಯಲಿದ್ದಾರೆ ಎಂದು ಕ್ರೈಂ ಬ್ರಾಂಚ್ ಮೂಲಗಳಿಂದ ತಿಳಿದು ಬಂದಿದೆ.
ಸಾದ್ ಅವರ ಕೋವಿಡ್-19 ಪರೀಕ್ಷಾ ವರದಿ ನೆಗೆಟಿವ್ ಬಂದಿರುವುದಾಗಿ ಹಾಗೂ ಅದನ್ನು ಕ್ರೈಂ ಬ್ರಾಂಚ್ ಪೊಲೀಸರಿಗೆ ಸಲ್ಲಿಸಿರುವುದಾಗಿ ಕಳೆದ ಏಪ್ರಿಲ್ನಲ್ಲಿಯೇ ಸಾದ್ ಪರ ವಕೀಲರು ಹೇಳಿದ್ದರು. ಆದರೂ ಸರ್ಕಾರಿ ಆಸ್ಪತ್ರೆಯಿಂದ ಕೋವಿಡ್-19 ಪರೀಕ್ಷೆ ಮಾಡಿಸಿ, ವರದಿಯನ್ನು ತಮಗೆ ಸಲ್ಲಿಸಬೇಕೆಂದು ದೆಹಲಿ ಪೊಲೀಸರು ಸಾದ್ಗೆ ತಾಕೀತು ಮಾಡಿದ್ದರು.
ಕೊರೊನಾ ವೈರಸ್ ಹರಡುತ್ತಿರುವಾಗ ಲಾಕ್ಡೌನ್ ಉಲ್ಲಂಘಿಸಿ ಜಾಗತಿಕ ಮಟ್ಟದ ತಬ್ಲಿಘಿ ಜಮಾತ್ ಸಮಾವೇಶ ನಡೆಸಿ, ಆ ಮೂಲಕ ಸಾವಿರಾರು ಜನರಿಗೆ ಕೋವಿಡ್ ಸೋಂಕು ಹರಡಲು ಕಾರಣವಾದ ಆರೋಪ ಸಾದ್ ಮೇಲಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಹಾಗೂ ದೆಹಲಿ ಪೊಲೀಸರು ಸಾದ್ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.