ಚುರು (ರಾಜಸ್ಥಾನ ) : ಪ್ರಾಚೀನ ಭಾರತೀಯ ಸಂಪ್ರದಾಯದಿಂದ ನಮಗೆ ಬಳುವಳಿಯಾಗಿ ಬಂದಿರುವ ಬಹುದೊಡ್ಡ ಉಡುಗೊರೆ ಎಂದರೆ ಯೋಗ. ಇದು ಮನಸ್ಸು ಮತ್ತು ದೇಹದ ಏಕತೆಯ ಸಂಕೇತವಾಗಿದೆ. ಯೋಗ ಎಂದರೆ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ. ಭಾರತೀಯ ಸಂಸ್ಕೃತಿಯಾದ ಯೋಗಕ್ಕೆ ಇಂದು ಜಾಗತಿಕ ಮನ್ನಣೆ ಸಿಕ್ಕಿದೆ. ಯೋಗದ ಮೂಲಕ ಹಲವಾರು ರೋಗಗಳಿಂದ ಮುಕ್ತಿ ಹೊಂದಿದವರು ಮತ್ತು ಸಾಧನೆ ಮಾಡಿದವರು ನಮ್ಮ ನಡುವೆ ಬಹಳಷ್ಟು ಮಂದಿ ಇದ್ದಾರೆ.
ನಾವೀಗ ಹೇಳಲು ಹೊರಟಿರುವುದು ಇಂತಹದ್ದೇ ವ್ಯಕ್ತಿಯೊಬ್ಬರ ಕಥೆ. ಇವರ ಹೆಸರು ಶಿವಭಗವಾನ್ ಭಾಕರ್. ರಾಜಸ್ತಾನದ ಸರ್ಧಾರ್ ಶಹರ್ ತಹಸಿಲ್ನ ಪಿಚ್ಕಾರೈ ತಾಲ್ ಗ್ರಾಮದ ನಿವಾಸಿ. ಶಿವಭಗವಾನ್ ಭಾಕರ್ ಅವರ ವಯಸ್ಸು 74. ಆದರೂ ಇಂದಿಗೂ ಈ ವ್ಯಕ್ತಿ ಯುವಕರನ್ನೇ ಬೆರಗುಗೊಳಿಸುವಂತೆ ಕಿ.ಮೀ ಗಟ್ಟಲೆ ಓಡುತ್ತಾರೆ ಮತ್ತು ವಿವಿಧ ಭಂಗಿಗಳನ್ನು ಮಾಡುತ್ತಾರೆ. ಇದಕ್ಕೆಲ್ಲ ಅವರು ಹೇಳುವ ಕಾರಣ ಯೋಗ.
ಶಿವಭಗವಾನ್ ಅವರಿಗೆ 2001 ರಲ್ಲಿ ಎರಡು ಬಾರಿ ಹೃದಯಾಘಾತವಾಗಿತ್ತಂತೆ. ಆ ಬಳಿಕ ಅವರ ಜೀವನ ಔಷಧಿಯನ್ನು ಅವಲಂಭಿಸುವಂತಾಯಿತು. ಜೊತೆಗೆ ಆಹಾರ ಕ್ರಮಗಳಿಗೂ ವೈದ್ಯರು ಇತಿಮಿತಿಗಳನ್ನು ಹಾಕಿದ್ದರು. ಈ ವೇಳೆ ತನ್ನ ಪರಿಸ್ಥಿತಿಯ ಬಗ್ಗೆ ಕಳವಳಗೊಂಡ ಶಿವಭಗವಾನ್, ಔಷಧಿಯ ಅವಲಂಬನೆಯಿಂದ ಹೊರಬರಲು ಹೊಸತೊಂದು ದಾರಿ ಹುಡುಕುತ್ತಿದ್ದರು. ಆಗ ಅವರಿಗೆ ಯೋಗಾಭ್ಯಾಸದ ಬಗ್ಗೆ ಮಾಹಿತಿ ಸಿಕ್ಕಿತ್ತು. ಬಾಬಾ ರಾಮ್ದೇವ್ ಅವರ ಯೋಗಪಾಠದಿಂದ ಸ್ಫೂರ್ತಿ ಪಡೆದ ಅವರು, ನಿಧಾನವಾಗಿ ಮನೆಯಲ್ಲಿ ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದರು.
ಯೋಗದಲ್ಲಿ ಆಸಕ್ತಿ ಮೂಡಿ 2007ರಲ್ಲಿ ಯೋಗವನ್ನು ಇನ್ನೂ ಚೆನ್ನಾಗಿ ಕಳಿಯುವ ಉದ್ದೇಶದಿಂದ ಅವರು ಪತಂಜಲಿ ಯೋಗ ಶಿಬಿರಕ್ಕೆ ಹೋಗಲು ನಿರ್ಧರಿಸಿದರು. ಬಳಿಕ ಭಗವಾನ್ ಅವರ ಜೀವನ ಶೈಲಿಯೇ ಬದಲಾಯಿತು. 2007 ರಿಂದ ಶಿವಭಗವಾನ್ ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು 2 ಕಿ.ಮೀ. ಓಡುತ್ತಾರೆ. ನಂತರ 3 ಗಂಟೆಗಳ ಕಾಲ ಯೋಗ ಮತ್ತು ಇತರ ವ್ಯಾಯಾಮಗಳನ್ನು ಅಭ್ಯಾಸ ಮಾಡುತ್ತಾರೆ. ಯೋಗದ ಮಾಯಾಜಾಲದಿಂದಾಗಿ ತನ್ನ ಎಲ್ಲಾ ಕಾಯಿಲೆಗಳನ್ನು ಗುಣಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಅವರು ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ಎಂದರೆ, ಒಂದು ಸಮಯದಲ್ಲಿ ಔಷಧಿ ಇಲ್ಲದೆ ಬದುಕುವುದು ಅಸಾಧ್ಯವೆಂದ ಶಿವಭಗವಾನ್ ಇಂದು ಔಷಧಿ ಸೇವಿಸದೆ ಬದುಕುತ್ತಿದ್ದಾರೆ.
ಶಿವಭಗವಾನ್ 38 ನೇ ವಯಸ್ಸಿನವರೆಗೆ ಕನ್ನಡಕ ಧರಿಸುತ್ತಿದ್ದರಂತೆ. ಆದರೆ, ಈಗ ಅವರಿಗೆ ಅದರ ಅಗತ್ಯವಿಲ್ಲ. 2001 ರಲ್ಲಿ ಅವರ ಹೃದಯಾಘಾತದ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮೂರು ತಿಂಗಳವರೆಗೆ ಅವರು ಔಷಧ ಸೇವಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ವೇಳೆ 100 ಗ್ರಾಂಗಿಂತ ಹೆಚ್ಚು ತುಪ್ಪ ಹಾಲು ಸೇವಿಸಿದರೆ ಆರೋಗ್ಯಕ್ಕೆ ಹಾನಿಕಾರಕ ಎಂದು ವೈದ್ಯರು ಹೇಳಿದ್ದರಂತೆ. ಆದರೆ, ಇಂದು ಶಿವಭಗವಾನ್ ದಿನಕ್ಕೆ 2 ರಿಂದ 3 ಲೀ ಹಾಲು ಕುಡಿಯುತ್ತಾರೆ, ಇಷ್ಟಪಟ್ಟಷ್ಟು ತುಪ್ಪ ಸೇವಿಸುತ್ತಾರೆ. ಶಿವಭಗವಾನ್ ತನ್ನ ಹಳ್ಳಿಯಲ್ಲಿ ನಡೆಯುವ ಹಲವಾರು ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಯುವಕರನ್ನು ಸುಲಭವಾಗಿ ಸೋಲಿಸುತ್ತಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಯೋಗ ಮಾಡಲು ಯುವಕರಿಗೆ ಪ್ರೇರಣೆ ನೀಡುತ್ತಾರೆ:
ಶಿವಭಗವಾನ್ ಯುವಕರಿಗೆ ಯೋಗದ ಮಹತ್ವ ಮತ್ತು ಅದು ಮಾನಸಿಕ ಒತ್ತಡವನ್ನು ಹೇಗೆ ಕಡಿಮೆ ಮಾಡುತ್ತದೆ ಎಂಬುದರ ಬಗ್ಗೆ ತಿಳಿಸುತ್ತಾರೆ. ಅವರಿಂದ ಪ್ರೇರಿತರಾದ ಹಲವಾರು ಯುವಕ-ಯುವತಿಯರು ಇಂದು ಯೋಗಾಭ್ಯಾಸ ಮಾಡುತ್ತಿದ್ದಾರೆ. ತನ್ನ ಗ್ರಾಮದ ಸುತ್ತಮುತ್ತಲಿನ ಜನರಿಗೆ ಶಿವಭಗವಾನ್ ಯೋಗ ಕಲಿಸುತ್ತಿದ್ದಾರೆ. ಯೋಗದಲ್ಲಿ ಸಾಧನೆ ಮಾಡಿದ ಅವರು ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಶಸ್ತಿ ಪಡೆಯಲಿದ್ದಾರೆ. ಶಿವಭಗವಾನ್ ಪ್ರಕಾರ ಎಲ್ಲಾ ವಯಸ್ಸಿನ ಜನರು ಪ್ರತಿದಿನ ಕನಿಷ್ಠ ಒಂದು ಗಂಟೆ ಯೋಗ ಮಾಡಿದರೆ ಅವರಿಗೆ ಯಾವುದೇ ರೋಗಗಳು ಬರುವುದಿಲ್ಲ.