ವಿಜಯವಾಡ(ಆಂಧ್ರಪ್ರದೇಶ): ತನ್ನ 73ನೇ ಇಳಿ ವಯಸ್ಸಿನಲ್ಲೂ ವೃದ್ಧನೋರ್ವ ದೇವಸ್ಥಾನಕ್ಕೆ ಬರೋಬ್ಬರಿ 8 ಲಕ್ಷ ರೂ ದೇಣಿಗೆ ನೀಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಕಳೆದ ಏಳು ವರ್ಷಗಳಿಂದ ಇಷ್ಟೊಂದು ಹಣ ದೇವರಿಗೆ ದೇಣಿಗೆ ರೂಪದಲ್ಲಿ ನೀಡಲಾಗಿದ್ದು, ಕಳೆದ ಹಲವು ವರ್ಷಗಳಿಂದ ಯಾದಿ ರೆಡ್ಡಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಈ ಹಿಂದೆ ರಿಕ್ಷಾ ಎಳೆಯುವ ಕೆಲಸ ಮಾಡುತ್ತಿದ್ದ ಇವರು, ಮೊಣಕಾಲುಗಳಲ್ಲಿ ನೋವು ಕಾಣಿಸಿಕೊಂಡು ಅದು ಸಾಧ್ಯವಾಗದೇ ಹೋದಾಗ ಭಿಕ್ಷೆ ಬೇಡಲು ನಿರ್ಧರಿಸಿದ್ದರು. ಸದ್ಯ ಕೂಡ ವಿಜಯವಾಡದ ದೇವಾಲಯಗಳ ಪ್ರವೇಶದ್ವಾರದ ಮುಂದೆ ಕುಳಿತು ಭಿಕ್ಷೆ ಬೇಡುವ ಕಾಯಕ ಮಾಡುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಯಾದಿ ರೆಡ್ಡಿ, ನಾನು 40 ವರ್ಷಗಳಿಂದ ರಿಕ್ಷಾ ಎಳೆಯಿವ ಕೆಲಸ ಮಾಡ್ತಿದೆ. ಆದರೆ ಮೊಣಕಾಲುಗಳು ತೊಂದರೆಗೆ ಒಳಗಾಗುತ್ತಿದ್ದಂತೆ, ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿದಾಗ ಭಿಕ್ಷೆ ಬೇಡಲು ನಿರ್ಧರಿಸಿದೆ ಎಂದಿದ್ದಾರೆ.
ನಾನು ದೇವಸ್ಥಾನಕ್ಕೆ ಹಣ ದಾನ ಮಾಡಿದ ನಂತರ ಜನರು ನನ್ನನ್ನು ಗುರುತಿಸಲು ಪ್ರಾರಂಭಿಸಿದರು. ಇದಾದ ಬಳಿಕ ನನಗೆ ಹೆಚ್ಚಿನ ರೀತಿಯಲ್ಲಿ ಜನರು ಭಿಕ್ಷೆ ನೀಡುತ್ತಿದ್ದು, ಹಣವನ್ನು ಸಾಯಿಬಾಬಾ ದೇವಸ್ಥಾನಕ್ಕೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇವರು ನೀಡಿರುವ ಹಣದಿಂದಲೇ ಗೋಶಾಲೆ ನಿರ್ಮಾಣ ಮಾಡಿದ್ದಾಗಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.