ಶ್ರೀನಗರ(ಜಮ್ಮು-ಕಾಶ್ಮೀರ): ಕಳೆದ ಎರಡು ವರ್ಷಗಳಿಂದ 7 ವರ್ಷದ ಬಾಲಕಿವೋರ್ವಳು ಶ್ರೀನಗರದ ಪ್ರಸಿದ್ಧ ದಾಲ್ ಸರೋವರ ಸ್ವಚ್ಛಗೊಳಿಸುತ್ತಿದ್ದು, ಆಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹೈದರಾಬಾದ್ ಮೂಲದ ಶಾಲೆಯವೊಂದು ತನ್ನ ಪಠ್ಯಕ್ರಮದಲ್ಲಿ ಆಕೆಯ ಜೀವನದ ಭಾಗವನ್ನ ಅಳವಡಿಸಿಕೊಂಡು ಪ್ರಕಟಿಸಿದ್ದು, ಇದೀಗ ಅದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿದೆ.
ಐದು ವರ್ಷದವಳಾದಾಗಿನಿಂದಲೂ ಜನ್ನತ್ ಈ ಕೆಲಸ ತಪ್ಪದೇ ಮಾಡ್ತಿದ್ದು, ಅನೇಕರಿಗೆ ಸ್ಫೂರ್ತಿಯಾಗಿದ್ದಾಳೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಏಳು ವರ್ಷದ ಬಾಲಕಿ, ತನ್ನ ತಂದೆಯಿಂದಲೇ ಪ್ರೇರಣೆ ಪಡೆದು ಈ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಈ ಮಹತ್ವಪೂರ್ಣ ಕೆಲಸಕ್ಕಾಗಿ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಮೆಚ್ಚುಗೆ ಪಡೆದುಕೊಂಡಿರುವ ಜನ್ನತ್ ಈಗಾಗಲೇ ಎಲ್ಲರಿಂದಲೂ ಪ್ರಶಂಸೆ ಪಡೆದುಕೊಂಡಿದ್ದಾಳೆ. ಈ ಹಿಂದೆ 2018ರಲ್ಲಿ ಈಕೆ ದಾಲ್ ಸರೋವರ್ ಸ್ವಚ್ಛ ಮಾಡ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು.
'ಶ್ರೀನಗರದ ರತ್ನ' ಎಂದೇ ಖ್ಯಾತವಾಗಿರುವ ದಾಲ್ ಸರೋವರ ಕಾಶ್ಮೀರದ ಎರಡನೆಯ ದೊಡ್ಡ ಸರೋವರ. ಇದು 26 ಚದರ ಕಿಲೋಮೀಟರ್ಗಳಷ್ಟು ವಿಸ್ತಾರವಾಗಿ ಹರಡಿದೆ. ಜಮ್ಮು-ಕಾಶ್ಮೀರದ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಈ ಸರೋವರ ಸಮುದ್ರ ಮಟ್ಟದಿಂದ 1775 ಮೀಟರ್ ಎತ್ತರದಲ್ಲಿದೆ.