ಲಖನೌ : ಹಿಂದಿ ಭಾಷೆಯ ತವರೂರು ಎಂದೇ ಕರೆಯಲ್ಪಡುವ ಉತ್ತರಪ್ರದೇಶದ 10 ಮತ್ತು 12ನೇ ತರಗತಿಯ ಸೆಕೆಂಡರಿ ಬೋರ್ಡ್ ಪರೀಕ್ಷೆಯಲ್ಲಿ ಸುಮಾರು 7.97 ಲಕ್ಷ ವಿದ್ಯಾರ್ಥಿಗಳು ಮಾತೃ ಭಾಷೆ ಹಿಂದಿಯಲ್ಲೇ ಅನುತ್ತೀರ್ಣರಾಗಿದ್ದಾರೆ. ಶನಿವಾರ ಪ್ರಕಟವಾದ ಫಲಿತಾಂಶದಲ್ಲಿ ಈ ಮಾಹಿತಿ ಬಯಲಾಗಿದೆ.
ಪರೀಕ್ಷಾ ಬೋರ್ಡ್ ಅಧಿಕಾರಿಗಳ ಪ್ರಕಾರ, ಹಿಂದಿ 12ನೇ ತರಗತಿ ಪರೀಕ್ಷೆಯಲ್ಲಿ 2.70 ಲಕ್ಷ ವಿದ್ಯಾರ್ಥಿಗಳು ಕನಿಷ್ಠ ಉತ್ತೀರ್ಣ ಅಂಕ ಗಳಿಸಲೂ ವಿಫಲರಾಗಿದ್ದಾರೆ. ಪ್ರೌಢ ಶಾಲಾ ವಿಭಾಗದಲ್ಲಿ 5.28 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಸುಮಾರು 2.39 ಲಕ್ಷ 12 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಹಿಂದಿ ಪರೀಕ್ಷೆಯನ್ನೇ ಬರೆದಿಲ್ಲ.
ಪರೀಕ್ಷಾ ಮೌಲ್ಯ ಮಾಪಕರೊಬ್ಬರು ನೀಡಿದ ಮಾಹಿತಿ ಪ್ರಕಾರ, ಹೆಚ್ಚಿನ ಮಕ್ಕಳಿಗೆ ಹಿಂದಿ ಭಾಷೆಯಲ್ಲಿ 'ಆತ್ಮವಿಶ್ವಾಸ', 'ಯಾತ್ರಾ' ಇಂತಹ ಸರಳ ಪದಗಳನ್ನೇ ಬರೆಯಲು ಬರುತ್ತಿಲ್ಲ. ಇದು ಅವರ ಜ್ಞಾನದ ಮಟ್ಟ ಪ್ರತಿಬಿಂಬಿಸುತ್ತದೆ. ಕಾಗುಣಿತ ತಪ್ಪಿನಿಂದ ಹೆಚ್ಚಿನ ಮಕ್ಕಳ ಉತ್ತರ ತಪ್ಪಾಗಿದೆ. ಹೀಗಾಗಿ ಅನುತ್ತೀರ್ಣರಾಗಿದ್ದಾರೆ ಎಂದು ಹೇಳಿದ್ದಾರೆ.
ಹಿಂದಿ ಮಾತೃ ಭಾಷೆಯಾಗಿದ್ದರಿಂದ ಅದರಲ್ಲಿ ನಮಗೆ ಭವಿಷ್ಯವಿಲ್ಲ ಎಂಬ ಭಾವನೆ ಹೆಚ್ಚಿನ ವಿದ್ಯಾರ್ಥಿಗಳಲ್ಲಿದೆ. ಆದ್ದರಿಂದ ಹಿಂದಿ ಭಾಷೆಯ ಬಗ್ಗೆ ಅವರು ನಿರ್ಲಕ್ಷ ಪ್ರವೃತ್ತಿ ಹೊಂದಿದ್ದಾರೆ. ಇದು ವಿದ್ಯಾರ್ಥಿಗಳು ದೊಡ್ಡ ಮಟ್ಟದಲ್ಲಿ ಅನುತ್ತೀರ್ಣರಾಗಲು ಇನ್ನೊಂದು ಕಾರಣ ಎಂದು ತಿಳಿಸಿದ್ದಾರೆ.
ಈ ಮಧ್ಯೆ, ಹಿಂದಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷ ಸುಮಾರು 10 ಲಕ್ಷ ಇತ್ತು ಎಂದು ಪರೀಕ್ಷಾ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷ ಸುಮಾರು 56 ಲಕ್ಷ ವಿದ್ಯಾರ್ಥಿಗಳು ಯುಪಿ ಸೆಕೆಂಡರಿ ಬೋರ್ಡ್ ಪರೀಕ್ಷೆ ಬರೆದಿದ್ದಾರೆ.