ಗುವಾಹಟಿ: ವರುಣನ ಆರ್ಭಟಕ್ಕೆ ಅಸ್ಸೋಂ ನಲುಗುತ್ತಿದ್ದು, ಪ್ರವಾಹದಿಂದಾಗಿ ಆರು ಮಂದಿ ಮೃತಪಟ್ಟಿದ್ದಾರೆ. ಬ್ರಹ್ಮಪುತ್ರ ಸೇರಿ ಐದು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಜನರು ಮತ್ತಷ್ಟು ಆತಂಕಗೊಂಡಿದ್ದಾರೆ.
ಅಸ್ಸೋಂನ 21 ಜಿಲ್ಲೆಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. 8 ಲಕ್ಷ ಜನರ ಬದಕು ನೀರುಪಾಲಾಗಿದೆ. ವಿಶ್ವದ ಬೃಹತ್ ನದಿಗಳಲ್ಲಿ ಒಂದಾದ ಬ್ರಹ್ಮಪುತ್ರ ನದಿ ತಟದ ಜನರು ಸಹ ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ.
ಈಗಾಗಲೇ ರಾಜ್ಯಾದ್ಯಂತ ಹಲವು ಸೇವೆಗಳು ಕಡಿತಗೊಂಡಿದ್ದು, ಮತ್ತಷ್ಟು ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆಯಿಂದ ಜನರು ಭಯಭೀತರಾಗಿದ್ದಾರೆ.
ಅಧಿಕಾರಿಗಳ ಮಾಹಿತಿಯಂತೆ 27,000 ಹೆಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ. ಸಂತ್ರಸ್ತರ ರಕ್ಷಣೆಗಾಗಿ 68 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರವಾಹದ ಮಧ್ಯೆ ಎನ್ಸೆಫಲಿಟೀಸ್ ಸೋಂಕಿನ ಹರಡುವಿಕೆಯೂ ಅಸ್ಸೋಂನಲ್ಲಿ ಹೆಚ್ಚಾಗಿದ್ದು, ಸೆಪ್ಟೆಂಬರ್ವರೆಗೆ ಆರೋಗ್ಯ ಇಲಾಖೆ ನೌಕರರ ರಜೆಗಳನ್ನು ರದ್ದು ಮಾಡಲಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳುವಂತೆ ಸಿಎಂ ಸರ್ಬಾನಂದ ಸೋನೊವಾಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಅಸ್ಸೋಂನ ನೆರೆ ರಾಜ್ಯ ಅರುಣಾಚಲ ಪ್ರದೇಶದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು, ಭೂ ಕುಸಿತದಿಂದ ಇಬ್ಬರು ಶಾಲಾ ಮಕ್ಕಳು ಮೃತಪಟ್ಟಿದ್ದಾರೆ. ಹಲವು ಪ್ರದೇಶಗಳು ಸಂಪರ್ಕ ಕಳೆದುಕೊಂಡಿವೆ.