ನವದೆಹಲಿ: ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ ಸೋಂಕಿತರ ಸಂಖ್ಯೆ 29,435 ಕ್ಕೆ ಏರಿಕೆಯಾಗಿದೆ.
ಸೋಮವಾರ ಮಹಾರಾಷ್ಟ್ರದಲ್ಲಿ 522 ಮತ್ತು ಗುಜರಾತ್ನಲ್ಲಿ 247 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಪ್ರಮಾಣ ಭೀತಿ ಮೂಡಿಸಿದೆ. ಇಂದೋರ್ನಲ್ಲಿ 196 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,372ಕ್ಕೆ ತಲುಪಿದೆ. ಮುಂಬೈ ನಗರದಲ್ಲಿ 369 ಹೊಸ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 3 ಸಾವಿರಕ್ಕೆ ತಲುಪಿದ್ದು, ಭಾನುವಾರ 293 ಮತ್ತು ಸೋಮವಾರ 190 ಹೊಸ ಪ್ರಕರಣಗಳು ದಾಖಲಾಗಿವೆ.
ಇನ್ನು ಸೋಂಕನ್ನು ನಿಯಂತ್ರಿಸುವಲ್ಲಿ ಅಲ್ಪ ಮಟ್ಟಿಗೆ ಯಶಸ್ವಿಯಾಗಿರುವ ರಾಜ್ಯಗಳಾದ ಬಿಹಾರ ಮತ್ತು ಜಾರ್ಖಂಡ್ನಲ್ಲಿ 68 ಮತ್ತು 20 ಹೊಸ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಸೋಮವಾರ ಅತೀ ಹೆಚ್ಚು 27 ಜನ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನುಳಿದಂತೆ, ಗುಜರಾತ್ 11, ರಾಜಸ್ಥಾನ 9, ಮಧ್ಯಪ್ರದೇಶ 7 ಮತ್ತು ಪಶ್ಚಿಮ ಬಂಗಾಳದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.
ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ತಲಾ ಒಂದು ಸಾವು ಸಂಭವಿಸಿದೆ. ಸದ್ಯ, ದೇಶದಲ್ಲಿ ಕೋವಿಡ್ -19ಗೆ ಬಲಿಯಾದವರ ಸಂಖ್ಯೆ 934 ಕ್ಕೇರಿದೆ. ಸತತ ಮೂರನೇ ದಿನ 50 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ದಾಖಲಾದ 369 ಸಾವುಗಳಲ್ಲಿ 219 ಮುಂಬೈ ನಗರದಲ್ಲಿ ಸಂಭವಿಸಿವೆ. ರಾಜ್ಯದಲ್ಲಿ ಸೋಮವಾರ 522 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,590 ಕ್ಕೆ ತಲುಪಿದೆ. ಹೊಸ ಪ್ರಕರಣಗಳಲ್ಲಿ, ಮುಂಬೈ ನಗರದಲ್ಲಿ ಶೇ. 70 ಅಥವಾ 369 ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರಲ್ಲಿ 5,776 ಜನ ಮುಂಬೈ ನಗರದವರಾಗಿದ್ದಾರೆ.
ಅಹಮದಾಬಾದ್ನಲ್ಲಿ ಸಾವಿನ ಪ್ರಮಾಣವು ಶೇ.4.7 ರಷ್ಟಿದ್ದು, ಮುಂಬೈಗಿಂತ ಶೇ.3.8 ಹೆಚ್ಚಿದೆ. ಗುಜರಾತ್ನಲ್ಲಿ ಕೋವಿಡ್ಗೆ ಬಲಿಯಾದವರ ಒಟ್ಟು ಪ್ರಮಾಣದಲ್ಲಿ ಶೇ 67 ಅಹಮದಾಬಾದ್ ನಗರದಲ್ಲಿ ಸಂಭವಿಸಿದೆ. ರಾಜಸ್ಥಾನದಲ್ಲಿ ಸೋಮವಾರ 9 ಜನ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿಗೀಡಾದವರ ಸಂಖ್ಯೆ 50ಕ್ಕೆ ತಲುಪಿದೆ. ರಾಜ್ಯದಲ್ಲಿ 77 ಹೊಸ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,262ಕ್ಕೆ ತಲುಪಿದೆ.