ಚೆನ್ನೈ: ದೆಹಲಿಯ ಮಸೀದಿಯೊಂದರಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಿಂದ ಇಡೀ ದೇಶವೇ ಬೆಚ್ಚಿಬಿದ್ದಿರುವ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಮಿಳುನಾಡು ಮೂಲದ 45 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವ ಅಘಾತಕಾರಿ ವಿಷಯ ಬಹಿರಂಗವಾಗಿದೆ.
ಚೆನ್ನೈಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ತಮಿಳುನಾಡಿನ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಪೀಲಾ ರಾಜೇಶ್, ನಿಜಾಮುದ್ದೀನ್ ಮುರ್ಕಜ್‌ನಲ್ಲಿ ಪಾಲ್ಗೊಂಡಿದ್ದ ರಾಜ್ಯದ 45 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಜತಗೆ ಇತರ 12 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟಾರೆ ತಮಿಳುನಾಡಿನಲ್ಲಿ ಇಂದು ಒಂದೇ ದಿನ 57 ಮಂದಿಗೆ ಸೋಂಕು ಇರುವುದು ಕನ್ಫರ್ಮ್ ಆಗಿದೆ ಎಂದಿದ್ದಾರೆ. ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ತಮಿಳುನಾಡಿನ 1 ಸಾವಿರದ 131 ಮಂದಿ ಭಾಗವಹಿಸಿದ್ದರು. ಇದರಲ್ಲಿ 515 ಮಂದಿಯನ್ನು ಈಗಾಗಲೇ ಗುರುತಿಸಿದ್ದು, ಇವರ ಮೇಲೆ ನಿಗಾವಹಿಸಲಾಗಿದೆ.
ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಉಳಿದವರನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದು ಪೀಲಾ ರಾಜೇಶ್ ಸ್ಪಷ್ಟಪಡಿಸಿದ್ದಾರೆ.