ಕಲ್ವಾ (ರಾಜಸ್ಥಾನ): ಹಕ್ಕಿ ಜ್ವರದ ಭೀತಿಯ ನಡುವೆ ನಾಗೌರ್ ಜಿಲ್ಲೆಯ ಕಲ್ವಾ ಪ್ರದೇಶದಲ್ಲಿ ಶುಕ್ರವಾರ ಇದ್ದಕ್ಕಿದ್ದಂತೆ 53 ಮೃತಪಟ್ಟ ನವಿಲುಗಳು ಪತ್ತೆಯಾಗಿವೆ. 26 ನವಿಲು ಗಾಯದಿಂದ ಬಳಲುತ್ತಿದ್ದು ಘಟನೆಗೆ ಕಾರಣ ಏನಿರಬಹುದೆಂದು ತಿಳಿದುಕೊಳ್ಳಲು ಅಧಿಕಾರಿಗಳು ಸತ್ತ ನವಿಲುಗಳ ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ.
ಕಲ್ವಾ ಪ್ರದೇಶದ ಸರ್ಕಾರಿ ಭೂಮಿಯಲ್ಲಿ ಮೃತಪಟ್ಟ ನವಿಲುಗಳು ಪತ್ತೆಯಾಗಿದ್ದು ಗ್ರಾಮದ ಸರ್ಪಂಚ್ ಈ ಬಗ್ಗೆ ಮಾಹಿತಿ ನೀಡಿದ್ದರಿಂದ ಪರಿಶೀಲನೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2019 ರಲ್ಲಿಯೂ ಇದೇ ರೀತಿಯ ಘಟನೆಯಾಗಿತ್ತು. ಆಗ ಬರೋಬ್ಬರಿ 250 ನವಿಲುಗಳು ಬುಂಡಿಯ ನೈನ್ವಾದಲ್ಲಿ ಮತ್ತು 300 ನಾಗೌರ್‌ನಲ್ಲಿ ಮೃತಪಟ್ಟಿದ್ದವು. 53 ಸೇರಿದಂತೆ ಈ ವರ್ಷದಲ್ಲಿ ಒಟ್ಟು 85ಕ್ಕೂ ಹೆಚ್ಚು ನವಿಲುಗಳು ಮೃತಪಟ್ಟಿವೆ ಎಂದು ಅಂದಾಜು ಮಾಡಲಾಗಿದೆ.
ಓದಿ: ರಾಜಸ್ಥಾನದಲ್ಲಿ ಎದುರಾಯ್ತಾ ಹಕ್ಕಿ ಜ್ವರದ ಭೀತಿ?: ಹಠಾತ್ತನೇ ಸಾವಿಗೀಡಾಗಿವೆ ನೂರಾರು ಕಾಗೆಗಳು !
ಗುರುವಾರ, ಹಲವಾರ್ ಮತ್ತು ಜೋಧ್ಪೂರ್ ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಮೃತಪಟ್ಟ ಕಾಗೆಗಳು ಪತ್ತೆಯಾಗಿದ್ದವು. ಘಟನೆಯಿಂದ ಅಲ್ಲಿಯ ಜನರು ಆತಂಕಕ್ಕೊಳಗಾಗಿದ್ದು ಸ್ಥಳೀಯ ಜಿಲ್ಲಾಡಳಿತವು 1 ಕಿ.ಮೀ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಿ ಆದೇಶ ನೀಡಿದೆ.