ಮುಂಬೈ: ಇಲ್ಲಿನ ಛತ್ರಪತಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಗಾಂಡ ಮೂಲದ ಮಹಿಳೆಯೊಬ್ಬರ ಚಪ್ಪಲಿಯಲ್ಲಿ ಸುಮಾರು 2.5 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ.
ವಿಮಾನ ನಿಲ್ದಾಣದ ಗುಪ್ತಚರ ಘಟಕವು ವಿದೇಶಿ ಮಹಿಳೆ ತನ್ನ ಚಪ್ಪಲಿಯಲ್ಲಿ ಅಡಗಿಸಿಟ್ಟುಕೊಂಡಿದ್ದ ಸುಮಾರು 2.5 ಕೋಟಿ ಮೌಲ್ಯದ 501 ಗ್ರಾಂ ಹೆರಾಯಿನ್ ಅನ್ನು ಪತ್ತೆ ಮಾಡಿದೆ. ಈಕೆ ಚಪ್ಪಲಿಯಲ್ಲಿ ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದಳು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರವಾಸಿ ವೀಸಾದಲ್ಲಿ ಈಕೆ ಮುಂಬೈಗೆ ಆಗಮಿಸಿದ್ದಾಗಿ ಗುಪ್ತಚರ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.
ಜೇನ್ ನಲೋ ಮಾನ್ಶಿ ಅಕಾ ಮಬಾಬಾಜಿ ಆಲಿವರ್ ಜೋಸೆಲಿನ್( 31) ಬಂಧಿತ ಮಹಿಳೆಯಾಗಿದ್ದು, ಮೂಲತಃ ಉಗಾಂಡ ನಿವಾಸಿಯಾಗಿದ್ದಾಳೆ. ಏರ್ಪೋರ್ಟ್ನಲ್ಲಿ ಏರ್ ಇಂಟೆಲಿಜೆನ್ಸ್ ಯುನಿಟ್ ಈಕೆಯ ಚಪ್ಪಲಿಯನ್ನು ಸ್ಕ್ಯಾನ್ ಮಾಡಿದಾಗ, ಅದರೊಳಗೆ ಅಡಗಿಸಿಟ್ಟಿದ್ದ 501 ಗ್ರಾಂ ಹೆರಾಯಿನ್ ಸೀಜ್ ಮಾಡಿ ಆಕೆಯನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಿದ್ದಾರೆ. ಮುಂಬೈ ಬಳಿಯ ನಲಸೋಪರಾದಲ್ಲಿ ವಾಸಿಸುತ್ತಿರುವ ಈ ಆರೋಪಿ ಮಹಿಳೆ ಮಾದಕ ವಸ್ತು ಕಳ್ಳಸಾಗಾಣಿಕೆದಾರರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಳು ಎಂದು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾಯು ಗುಪ್ತಚರ ಘಟಕದ ತನಿಖೆಯಿಂದ ತಿಳಿದು ಬಂದಿದೆ.