ನವದೆಹಲಿ: ಕಳೆದ ಒಂದು ವರ್ಷದಲ್ಲಿ ತಮ್ಮ ಜೀವನದ ಗುಣಮಟ್ಟ ಸಾಕಷ್ಟು ಹದಗೆಟ್ಟಿದೆ ಎಂದು ಶೇ 50ಕ್ಕೂ ಹೆಚ್ಚು ಜನರು ಅಭಿಪ್ರಾಯಪಟ್ಟಿದ್ದಾರೆ ಎಂದು ಮಾಧ್ಯಮ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯೊಂದು ಹೇಳಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಬಜೆಟ್ ಮಂಡನೆ ಬಳಿದ ಮಾಧ್ಯಮ ಸಂಸ್ಥೆಯೊಂದು ದೇಶದ ವಿವಿಧ ಭಾಗಗಳಿಂದ ಸುಮಾರು 1,200 ಮಂದಿಯ ಮೇಲೆ ಸಮೀಕ್ಷೆ ನಡೆಸಿತ್ತು. ಈ ವೇಳೆ ಪ್ರಶ್ನೆಯೊಂದಕ್ಕೆ ಉತ್ತರ ಕೇಳಲಾಗಿದ್ದು, ಶೇಕಡಾ 50.7ರಷ್ಟು ಮಂದಿ ತಮ್ಮ ಜೀವನ ಗುಣಮಟ್ಟ ಒಂದು ವರ್ಷದಿಂದ ಹದಗೆಟ್ಟಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಯಾವುದೇ ಕಾರಣಕ್ಕೂ ಏರಿಕೆಯಿಲ್ಲ: ಕೇಂದ್ರ ಸಚಿವ ಜಾವಡೇಕರ್
ಕಳೆದ ವರ್ಷದ ಬಜೆಟ್ ನಂತರ ಇದೇ ಪ್ರಶ್ನೆಯನ್ನು ಕೇಳಿದಾಗ ಶೇ 31.3ರಷ್ಟು ಮಂದಿ ತಮ್ಮ ಜೀವನ ಹದಗೆಟ್ಟಿದೆ ಎಂದು ಹೇಳಿದ್ದಾರೆ. 2015ರಲ್ಲಿ ಶೇ 27.2ರಷ್ಟು ಮಂದಿ, 2016ರಲ್ಲಿ ಶೇ 31.4ರಷ್ಟು, 2017ರಲ್ಲಿ ಶೇ 32ರಷ್ಟು ಮಂದಿ, 2018ರಲ್ಲಿ ಶೇ 42.4ರಷ್ಟು ಮತ್ತು 2019ರಲ್ಲಿ ಶೇ 28.7ರಷ್ಟು ಮಂದಿ ಇದೇ ಉತ್ತರವನ್ನು ನೀಡಿದ್ದಾರೆ.
ಈಗಿನ ಸಮೀಕ್ಷೆಯಲ್ಲಿ ಹಿಂದಿನ ವರ್ಷದ ಜೀವನ ಮಟ್ಟ ಮತ್ತು ಈ ವರ್ಷದ ಜೀವನ ಮಟ್ಟ ಒಂದೇ ಆಗಿದೆ ಎಂದು ಶೇ 21.3ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಕೆಲವೊಂದು ಪ್ರಶ್ನೆಗಳಿಗೆ ಒಂದೇ ಅಭಿಪ್ರಾಯವನ್ನು ಶೇಕಡಾ 32.1ರಷ್ಟು ಮಂದಿ ನೀಡಿದ್ದಾರೆ. 2019ರಲ್ಲಿ ಒಂದೇ ಅಭಿಪ್ರಾಯ ನೀಡಿದವರ ಪ್ರಮಾಣ ಶೇ 26ರಷ್ಟಿತ್ತು.
ಈ ಬಾರಿಯ ಸಮೀಕ್ಷೆಯಲ್ಲಿ ಶೇ 17.3ರಷ್ಟು ಮಂದಿ ತಮ್ಮ ಜೀವನ ಗುಣಮಟ್ಟ ಕಳೆದ ವರ್ಷಕ್ಕಿಂತ ಸುಧಾರಣೆ ಕಂಡಿದೆ ಎಂದು ಹೇಳಿದ್ದು, ಶೇ 10.7ರಷ್ಟು ಮಂದಿ ಈ ವಿಚಾರದಲ್ಲಿ 'ಏನೂ ತಿಳಿದಿಲ್ಲ' ಅಥವಾ 'ಏನೂ ಹೇಳಲು ಸಾಧ್ಯವಿಲ್ಲ' ಎಂಬ ಅಭಿಪ್ರಾಯ ಹೊಂದಿದ್ದಾರೆ.