ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯಲ್ಲಿ ಲಲಿತಾ ಜ್ಯೂವೆಲ್ಲರಿಗೆ ಕನ್ನ ಹಾಕಲಾಗಿದೆ. ಸುಮಾರು 50 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ ಮಾಡಲಾಗಿದೆ. 28 ಕೆ.ಜಿ. ಚಿನ್ನಾಭರಣ ಕಳ್ಳತನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುಚ್ಚಿಯ ಬಸ್ ಸ್ಟಾಪ್ ಸಮೀಪವೇ ಈ ಆಭರಣ ಮಳಿಗೆ ಇತ್ತು. ಎಂದಿನಂತೆ ಬುಧವಾರ ಬೆಳಗ್ಗೆ ಜ್ಯೂವೆಲ್ಲರಿ ಶಾಪ್ ತೆರದಾಗ ಕಳ್ಳತನ ಆಗಿರುವ ಮಾಹಿತಿ ಗೊತ್ತಾಗಿದೆ. ಸಿಬ್ಬಂದಿ ಬಾಗಿಲು ತೆಗೆಯುತ್ತಿದ್ದಂತೆ ಅಂಗಡಿಯೆಲ್ಲ ಖಾಲಿಯಾಗಿರುವುದು ಗೊತ್ತಾಗಿದೆ. ತಕ್ಷಣವೇ ಆಭರಣ ಮಳಿಗೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಅಂಗಡಿಯನ್ನ ಪರಿಶೀಲನೆ ಮಾಡಿದಾಗ ಮಳಿಗೆಯ ಗೋಡೆಯನ್ನ ಕೊರೆದು ಕಳ್ಳತನ ಮಾಡಿರುವ ಸಂಗತಿ ಬಯಲಾಗಿದೆ. ವಿಶೇಷ ಎಂದರೆ ಈ ಅಂಗಡಿಗೆ 24 ಗಂಟೆ ಸೆಕ್ಯೂರಿಟಿ ಇದ್ದಾಗಲೂ ಕಳ್ಳತನ ಆಗಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.
ಈ ಸಂಬಂಧ ಪ್ರಕರಣದ ದಾಖಲಿಸಿಕೊಂಡಿರುವ ಪೊಲೀಸರು ಷೋ ರೂಂನಲ್ಲಿರುವ ಸಿಸಿ ಟಿವಿ ಫೂಟೇಜ್ ಪರಿಶೀಲನೆ ಮಾಡಿದಾಗ ಕಳ್ಳರು ಮಕ್ಕಳು ಆಡುವ ಪ್ರಾಣಿಗಳ ಮುಖವಾಡವನ್ನು ಧರಿಸಿದ್ದು ಬೆಳಕಿಗೆ ಬಂದಿದೆ. ಇಬ್ಬರು ಕಳ್ಳರು ಪ್ರಾಣಿಗಳ ಮುಖವಾಡ ಧರಿಸಿ ಆಭರಣವನ್ನು ದೋಚುತ್ತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ.