ಉತ್ತರ ಪ್ರದೇಶ: ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಪರಿವಾರವೊಂದು ಅಪಘಾತಕ್ಕೀಡಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೈದು ಮಂದಿ ಗಂಭೀರವಾಗಿರುವ ದುರ್ಘಟನೆ ಉತ್ತರ ಪ್ರದೇಶದ ಫಿಲಿಬಿತ್ ಜಿಲ್ಲೆಯಲ್ಲಿ ನಡೆದಿದೆ.
ತಡರಾತ್ರಿ ಉತ್ತರ ಪ್ರದೇಶದ ಫಿಲಿಬಿತ್ ಜಿಲ್ಲೆಯಲ್ಲಿ ನಡೆದಿರುವ ಭಯಾನಕ ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಾಳುಗಳು ಪೂರನ್ಪುರದ ಕೋತ್ವಾಲಿಯ ಜೋಶಿ ಕಾಲೋನಿ ನಿವಾಸಿಗಳು ಎಂದು ತಿಳಿದುಬಂದಿದೆ. ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಜಿಲ್ಲೆಯಲ್ಲಿ ಭಾರೀ ಮಳೆ ಗಾಳಿ ಹಿನ್ನಲೆ ವಾತಾವರಣ ಹದಗೆಟ್ಟಿದ್ದ ಹಿನ್ನಲೆ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಐವರು ಸ್ಥಳದಲ್ಲಿ ಸಾವನ್ನಪ್ಪಿದ್ಧಾರೆ. ಜೊತೆಗೆ ಇನ್ನೂ ಐವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಾಯಾಳುಗಳ ಸ್ಥಿತಿ ತೀರಾ ಗಂಭೀರವಾಗಿದ್ದರಿಂದ ಅವರನ್ನು ತಕ್ಷಣ ಬರೇಲಿಯ ದೊಡ್ಡಾಸ್ಪತ್ರೆಗೆ ದಾಖಲಿಸುವಂತೆ ತಿಳಿಸಲಾಗಿದೆ.