ಮುಂಬಯಿ: ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ 348 ಪ್ರಕರಣಗಳನ್ನು ರಾಜ್ಯ ಸರ್ಕಾರ ಈವರೆಗೆ ಹಿಂತೆಗೆದುಕೊಂಡಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿಧಾನ ಪರಿಷತ್ತಿಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಶಾಸಕ ಶರದ್ ರಾನ್‌ಪೈಸ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಈ ವಿಷಯ ತಿಳಿಸಿದ್ದಾರೆ. "ಭೀಮಾ ಕೊರೆಗಾಂವ್ ಹಿಂಸಾಚಾರದಲ್ಲಿ ದಾಖಲಾದ ಒಟ್ಟು 649 ಪ್ರಕರಣಗಳಲ್ಲಿ 348 ಪ್ರಕರಣಗಳನ್ನು ಈವರೆಗೆ ಹಿಂತೆಗೆದುಕೊಳ್ಳಲಾಗಿದೆ. ವಿಚಾರಣೆ ಮುಗಿದ ನಂತರ ಉಳಿದ ಪ್ರಕರಣಗಳನ್ನು ಹಿಂಪಡೆಯಲಾಗುವುದು" ಎಂದು ಅವರು ಹೇಳಿದರು.
ಎಲ್ಗರ್ ಪರಿಷತ್ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ತನಿಖಾ ಆಯೋಗವನ್ನು ರಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ದೇಶಮುಖ್ ತಿಳಿಸಿದರು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈ ಪ್ರಕರಣದ ತನಿಖೆ ನಡೆಸಿದ ರೀತಿ ನಿರಾಶಾದಾಯಕವಾಗಿದೆ ಎಂದು ಅವರು ಹೇಳಿದರು. ಡಿಸೆಂಬರ್ 31, 2017ರಂದು ಪುಣೆಯಲ್ಲಿ ನಡೆದ 'ಎಲ್ಗರ್ ಪರಿಷತ್ ಸಮಾವೇಶ'ಕ್ಕೆ ಮಾವೋವಾದಿಗಳ ಬೆಂಬಲವಿತ್ತು. ಈ ಸಂದರ್ಭದಲ್ಲಿ ಮಾಡಿದ ಪ್ರಚೋದನಾಕಾರಿ ಭಾಷಣಗಳು ಮರುದಿನ ಭೀಮಾ ಕೊರೆಗಾಂವ್ ಯುದ್ಧ ಸ್ಮಾರಕದಲ್ಲಿ ಜಾತಿ ಹಿಂಸಾಚಾರಕ್ಕೆ ಕಾರಣವಾಯಿತು ಎಂಬುದು ಪುಣೆ ಪೊಲೀಸರ ಹೇಳಿಕೆಯಾಗಿದೆ.
ಕಳೆದ ತಿಂಗಳು ಕೇಂದ್ರ ಸರ್ಕಾರವು ಎಲ್ಗರ್ ಪರಿಷತ್ ಪ್ರಕರಣದ ತನಿಖೆಯನ್ನು ಪುಣೆ ಪೊಲೀಸರಿಂದ ಎನ್‌ಐಎಗೆ ವರ್ಗಾಯಿಸಿತ್ತು. ಈ ಕ್ರಮವನ್ನು ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್ ಸರ್ಕಾರವು ಟೀಕಿಸಿತ್ತು. ಆದರೆ, ನಂತರ ಮಹಾರಾಷ್ಟ್ರ ರಾಜ್ಯ ಸರ್ಕಾರವು ತನ್ನ ನಿಲುವನ್ನು ಬದಲಿಸಿ, ಎನ್‌ಐಎ ತನಿಖೆಗೆ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿತ್ತು.