ಹೈದರಾಬಾದ್ (ತೆಲಂಗಾಣ): ಸಮಾಜದ ಮುಖ್ಯವಾಹಿನಿಗೆ ಬರುವ ಸಲುವಾಗಿ 33 ಮಂದಿ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಭದ್ರಾದ್ರಿ ಕೋತಗುಡೆಂ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚೆರ್ಲ ಮಂಡಲ್ ಪ್ರದೇಶದ ಭಟ್ಟಿನಪಲ್ಲಿ ಹಾಗೂ ಕಿಶ್ತಾರಮ್ಪಡು ಗ್ರಾಮಗಳಿಗೆ ಸೇರಿದ ನಕ್ಸಲರು ತಾವೇ ಸಿಆರ್ಪಿಎಫ್ ಹಾಗೂ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶರಣಾದ ನಕ್ಸಲರಲ್ಲಿ ಎಂಟು ಮಂದಿ ಛತ್ತೀಸ್ಗಢದಲ್ಲಿ ಎರಡು ವರ್ಷಗಳಿಂದ ನಕ್ಸಲರಾಗಿದ್ದರು. ಇದರಲ್ಲಿ ಕೆಲವರು ರಸ್ತೆ ಸ್ಫೋಟ, ನಿರ್ಮಾಣ ಹಂತದ ಕಾಮಗಾರಿ ಸ್ಫೋಟಗೊಳಿಸುವಿಕೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.
ನಕ್ಸಲರನ್ನು ಮುಖ್ಯವಾಹಿನಿಗೆ ತರಬೇಕೆನ್ನುವ ಉದ್ದೇಶದಿಂದ ಪೊಲೀಸರು ಮನವೊಲಿಸಲು ಮುಂದಾಗಿದ್ದು, ಪೊಲೀಸರ ಮಾತಿಗೆ ಬೆಲೆ ಕೊಟ್ಟು ಅವರು ಶರಣಾಗಿದ್ದಾರೆ ಎಂದು ಭದ್ರಾದ್ರಿ ಕೋತಗುಡೆಂ ಎಸ್ಪಿ ಸುನೀಲ್ ದತ್ ಹೇಳಿದ್ದಾರೆ.
ಸದ್ಯಕ್ಕೆ ಶರಣಾದ ನಕ್ಸಲರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಆ ಯೋಜನೆಗಳಲ್ಲಿ ಈ ನಕ್ಸಲರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.