ಅಹಮದಾಬಾದ್: 30 ವರ್ಷದ ವಿವಾಹಿತ ಮಹಿಳೆ ಕಟ್ಟಡದ 13ನೇ ಅಂತಸ್ತಿನಿಂದ ಜಿಗಿದಿದ್ದು ಕೆಳಗಿದ್ದ 69 ವರ್ಷದ ವ್ಯಕ್ತಿಯ ಮೇಲೆ ಬಿದ್ದಿದ್ದಾಳೆ. ಈ ವೇಳೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, 30 ವರ್ಷದ ಮಮತಾ ರಾಥಿ ತನ್ನ ಗಂಡ ಹಾಗೂ 4 ವರ್ಷದ ಮಗುವಿನೊಂದಿಗೆ ಅಹಮದಾಬಾದ್ನ ಅಮ್ರೆವಾಡಿಯಲ್ಲಿರುವ ತನ್ನ ಸಹೋದರನ ನಿವಾಸಕ್ಕೆ ಚಿಕಿತ್ಸೆಗಾಗಿ ಬಂದಿದ್ದಳು. ಇಂದು ಬೆಳಗ್ಗೆ 8ಗಂಟೆಗೆ ಮಹಿಳೆ ಏಕಾಏಕಿಯಾಗಿ 13ನೇ ಅಂತಸ್ತಿನಿಂದ ಕೆಳಗೆ ಹಾರಿದ್ದಾಳೆ. ಇದೇ ವೇಳೆ ಕೆಳಗಡೆ ಹೊರಟಿದ್ದ 69 ವರ್ಷದ ಬಲುಬಾಯ್ ಎಂಬ ಹಿರಿಯ ನಾಗರಿಕನ ಮೇಲೆ ಬಿದ್ದಿರುವುದರಿಂದ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಮಹಿಳೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.