ಧೋಲ್ಪುರ್(ರಾಜಸ್ಥಾನ): ಕಳೆದೆರಡು ದಿನಗಳ ಹಿಂದೆ 24 ವರ್ಷದ ಯುವತಿಯೋರ್ವಳ ಮೇಲೆ ಆರು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಅಂತಹ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ದೋಲ್ಪುರ್ದಲ್ಲಿರುವ ದೇವಸ್ಥಾನದಿಂದ ಮರಳಿ ಮನೆಗೆ ಬರುತ್ತಿದ್ದ ವೇಳೆ 30 ವರ್ಷದ ಮಹಿಳೆಯೋರ್ವಳ ಮೇಲೆ ಕಾಮುಕರು ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ನಡೆದಿದೆ. ಇದೀಗ ಸಂತ್ರಸ್ತ ಮಹಿಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾಳೆ.
ದೇವಸ್ಥಾನದಿಂದ ವಾಪಸ್ ಬರುತ್ತಿದ್ದ ವೇಳೆ ಮೋಟಾರ್ ಸೈಕಲ್ ಮೇಲೆ ಬಂದಿರುವ ಕಾಮುಕರು ಪಿಸ್ತೂಲ್ ತೋರಿಸಿ, ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಜತೆಗೆ ನಿರ್ಜನ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ದುಷ್ಕೃತ್ಯವೆಸಗಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಕಾಮುಕ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.