ಕಠ್ಮಂಡು: ಎರಡೂ ದೇಶಗಳಲ್ಲಿ ಲಾಕ್ಡೌನ್ ಇದ್ದು, ಇದರ ನಡುವೆ ಮಹಾಕಾಳಿ ನದಿಯಲ್ಲಿ ಈಜಿಕೊಂಡು ಭಾರತದಿಂದ ನೇಪಾಳಕ್ಕೆ ತಲುಪುವ ವಿಫಲ ಯತ್ನ ನಡೆಸಿರುವ ಮೂವರು ನೇಪಾಳದ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ.
ಭಾರತ - ನೇಪಾಳ ಗಡಿಭಾಗವಾದ ಉತ್ತರಾಖಂಡದ ಪಿಥೋರಗರ್ ಜಿಲ್ಲೆಯ ಧಾರ್ಚುಲದಲ್ಲಿ ಕಳೆದ ನಾಲ್ಕು ದಿನಗಳಿಂದ ನೇಪಾಳದ 500 ಮಂದಿ ಸಿಲುಕಿದ್ದರು. ಇವರಲ್ಲಿ ಅನೇಕ ಮಂದಿ ದಿನಗೂಲಿಗಾಗಿ ಭಾರತಕ್ಕೆ ಬಂದಿದ್ದರು. ನೇಪಾಳ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮನ್ನು ಪಾರು ಮಾಡುವಂತೆ ಭಾನುವಾರ ಕೇಳಿದ್ದರು. ಬಳಿಕ ನೇಪಾಳ ಸರ್ಕಾರವು ಇವರನ್ನು ಕರೆಯಿಸಿಕೊಂಡು 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಿಸಲು ತೀರ್ಮಾನಿಸಲಾಗಿತ್ತು. ಆದರೆ ಸರ್ಕಾರ ಸೋಮವಾರ, ಕೊರೊನಾ ಭೀತಿಗೆ ಗಡಿಯಾಚೆಗಿನ ಜನರ ಪ್ರವೇಶ ನಿರ್ಬಂಧ ಅವಧಿಯನ್ನು ಇನ್ನೂ 10 ದಿನಗಳ ಕಾಲಕ್ಕೆ ವಿಸ್ತರಿಸಿತು.
ಇದಕ್ಕೂ ಮೊದಲು ಶುಕ್ರವಾರ ರಾತ್ರಿ, ಭಾರತ - ನೇಪಾಳಕ್ಕೆ ಸಂಪರ್ಕ ಕಲ್ಪಿಸುವ ತೂಗು ಸೇತುವೆಯನ್ನು ತೆರೆದು ಈ ಮೂಲಕ 225 ಮಂದಿ ನೇಪಾಳದ ಪ್ರಜೆಗಳನ್ನು ಮರಳಿ ದೇಶಕ್ಕೆ ಅಧಿಕಾರಿಗಳು ಕರೆದೊಯ್ದಿದ್ದರು. ಹೀಗಾಗಿ ತೂಗು ಸೇತುವೆಯ ಗೇಟ್ ತೆರೆಯುವಂತೆ ನಾವು ಜಿಲ್ಲಾಡಳಿತದ ಮುಖ್ಯ ಅಧಿಕಾರಿಗಳನ್ನು ಮನವಿ ಮಾಡಿಕೊಳ್ಳಲೆಂದು ಈಜಿಕೊಂಡು ಹೋದೆವು ಎಂದು ಬಂಧಿಸಲ್ಪಟ್ಟ ಮೂವರು ಹೇಳಿದ್ದಾರೆ.