ವೆಲ್ಲೂರು (ತಮಿಳುನಾಡು): ಸುಮಾರು 2,500 ದೇಸಿ ಕೋಳಿಗಳು ಪ್ರವಾಹದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವೆಲ್ಲೂರು ಜಿಲ್ಲೆಯ ಕಟ್ಪಾಡಿ ಬಳಿಯ ಪಿ.ಆರ್.ಕುಪ್ಪಂನಲ್ಲಿ ಕಂಡು ಬಂದಿದೆ.
ಪಿ.ಆರ್.ಕುಪ್ಪಂನ ನಿವಾಸಿ ಮೋಹನ್ ಎನ್ನುವವರು ತಮ್ಮ ಕೃಷಿ ಭೂಮಿಯಲ್ಲಿ ಕಳೆದ 11 ವರ್ಷಗಳಿಂದ ದೇಸಿ ಕೋಳಿ ಸಾಕಣೆ ಮಾಡಿಕೊಂಡಿದ್ದರು. ನವೆಂಬರ್ 26 ರಿಂದ 'ನಿವಾರ್' ಚಂಡಮಾರುತದ ಹಿನ್ನೆಲೆ ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಪರಿಣಾಮ ಪೊನ್ನೈ ನದಿ ಉಕ್ಕಿ ಹರಿಯುತ್ತಿದೆ. ಜೊತೆಗೆ ನದಿ ನೀರು ಕೋಳಿಫಾರಂ ಒಳಗೆ ನುಗಿದ್ದು, 2,500 ದೇಸಿ ಕೋಳಿಗಳು ಪ್ರವಾಹದಿಂದ ಸಾವನ್ನಪ್ಪಿವೆ.
ಇನ್ನು 5 ಆಡುಗಳು ಮತ್ತು 2.5 ಕೆ.ಜಿ ತೂಕದ 2,500 ದೇಸಿ ಕೋಳಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಒಟ್ಟು 5000 ಕೋಳಿಗಳಲ್ಲಿ ಉಳಿದವುಗಳನ್ನು ರಕ್ಷಿಸಲಾಗಿದೆ. ಜೊತೆಗೆ ಫಾರ್ಮ್ ಶೆಡ್ ಸೇರಿದಂತೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಘಟನೆಯ ಕುರಿತು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ರೈತ ಮೋಹನ್ ಮಾಹಿತಿ ನೀಡಿದ್ದಾರೆ.