ಕೊಚ್ಚಿನ್: ದೇವರನಾಡು ಕೇರಳದಲ್ಲಿ ಮಾರಣಾಂತಿಕ 'ನಿಫಾ' ಸೋಂಕು ಪ್ರಕರಣ ಪತ್ತೆಯಾಗಿದ್ದು, ಇಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ದೃಢಪಡಿಸಿದ್ದಾರೆ. ಆದರೆ, ಜನರು ಆತಂಕಪಡುವ ಅಗತ್ಯವಿಲ್ಲವೆಂದು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಚ್ಚಿನ್ನ ಆಸ್ಪತ್ರೆಯಲ್ಲಿ ದಾಖಲಾಗಿರುವ 23 ವರ್ಷದ ಕಾಲೇಜು ವಿದ್ಯಾರ್ಥಿನಿ 'ನಿಫಾ' ವೈರಸ್ಗೆ ತುತ್ತಾಗಿದ್ದಾಳೆ. ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ವಿದ್ಯಾರ್ಥಿನಿಯ ರಕ್ತದ ಮಾದರಿಯನ್ನು ಪ್ರಯೋಗಕ್ಕೊಳಪಡಿಸಿ, ನಿಫಾ ವೈರಸ್ ದಾಳಿ ಮಾಡಿರುವ ಬಗ್ಗೆ ದೃಢಪಡಿಸಿದೆ ಎಂದರು.
ತಕ್ಷಣಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಭಯ ಪಡುವ ಅವಶ್ಯಕತೆಯಿಲ್ಲ. ವಿದ್ಯಾರ್ಥಿನಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು. ಇದೇ ಕಾರಣಕ್ಕೆ, 85 ಮಂದಿಯನ್ನು ಪರೀಕ್ಷಿಸಲಾಗಿದ್ದು, ರೋಗದ ಬಗ್ಗೆ ನಿಗಾ ಇಡಲಾಗಿದೆ. ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಇಬ್ಬರು ನರ್ಸ್ಗಳಿಗೂ ಸೋಂಕು ತಗುಲಿರುವ ಸಂಶಯವಿದೆ ಎಂದು ಹೇಳಿದರು.
ವೈರಸ್ ಹರಡುವಿಕೆ ತಡೆಯುವುದೇ ನಮ್ಮ ಮೊದಲ ಆದ್ಯತೆ. ಆನಂತರ ಸೋಂಕಿನ ಮೂಲ ಪತ್ತೆ ಮಾಡುವ ಕಾರ್ಯ ಮಾಡುತ್ತೇವೆ ಎಂದರು.
ಕಳೆದ ವರ್ಷ ಮೇ ತಿಂಗಳಲ್ಲಿ ಕೇರಳದ ಕೋಜಿಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ನಿಫಾದಿಂದ 12 ಮಂದಿ ಸಾವನ್ನಪ್ಪಿ, 22 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದವು. ಇದೀಗ ಮತ್ತಷ್ಟು ವ್ಯಾಪಕವಾಗಿ ನಿಫಾ ಹರಡುತ್ತಿದೆ ಎಂಬ ಆತಂಕ ಎದುರಾಗಿದ್ದು, ಕೇರಳದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಈ ಬಗ್ಗೆ ಪ್ರತಿಕ್ರಿಯಿಸಿ, ಕೇಂದ್ರದಿಂದ ಎಲ್ಲಾ ನೆರವನ್ನು ಕೇರಳಕ್ಕೆ ದೊರಕಿಸಲಾಗುವುದು. ವನ್ಯಜೀವಿ ಇಲಾಖೆಯೊಂದಿಗೂ ಸಂಪರ್ಕದಲ್ಲಿದ್ದು, ಬಾವಲಿಗಳನ್ನು ಪರೀಕ್ಷಿಸಲು ಸಹಕಾರ ನೀಡುತ್ತೇವೆ. ಗಾಬರಿಪಡುವ ಅಗತ್ಯವಿಲ್ಲ ಎಂದರು.