ನವದೆಹಲಿ: ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟವನ್ನು ಸುಧಾರಿಸಲು ದೆಹಲಿ ಸರ್ಕಾರವು ನಗರದಾದ್ಯಂತ ಪ್ರಮುಖ ಸ್ಥಳಗಳಲ್ಲಿ 23 ಆ್ಯಂಟಿ ಸ್ಮೋಗ್ ಗನ್ಗಳನ್ನು ಸ್ಥಾಪಿಸಿದೆ. ಅಗತ್ಯವಿದ್ದರೆ ಈ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದೆ.
ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಈ 23 ಆ್ಯಂಟಿ ಸ್ಮೋಗ್ ಗನ್ಗಳನ್ನು ಅಳವಡಿಸಿದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.
ವಾಯು ಮಾಲಿನ್ಯವನ್ನು ನಿಯಂತ್ರಿಸಲು ಮರಗಳು, ರಸ್ತೆಗಳು ಮತ್ತು ನಿರ್ಮಾಣ ಸ್ಥಳಗಳಲ್ಲಿ ನೀರನ್ನು ಸಿಂಪಡಿಸಲು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಇದಕ್ಕಾಗಿ ಒಟ್ಟು 150 ವಾಟರ್ ಟ್ಯಾಂಕರ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿಯ ಎಲ್ಲಾ ಪ್ರಮುಖ ರಸ್ತೆಗಳನ್ನು ಒಳಗೊಳ್ಳುವಂತೆ ಟ್ಯಾಂಕರ್‌ಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸುವಂತೆ ನಾನು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಗತ್ಯವಿದ್ದರೆ, ನಾವು ಹೆಚ್ಚು ವಾಯುಮಾಲಿನ್ಯ ವಿರೋಧಿ ಬಂದೂಕುಗಳನ್ನು ನಿಯೋಜಿಸುತ್ತೇವೆ ಎಂದರು.
ಹೆಚ್ಚುತ್ತಿರುವ ಮಾಲಿನ್ಯವನ್ನು ತಡೆಯಲು ದೆಹಲಿ ಸರ್ಕಾರವು ನವೆಂಬರ್ 5 ರವರೆಗೆ ನಗರದಲ್ಲಿ ಎಲ್ಲಾ ರೀತಿಯ ಪಟಾಕಿಗಳನ್ನು ಮಾರಾಟ ಮಾಡುವುದು ಮತ್ತು ಬಳಸುವುದನ್ನು ನವೆಂಬರ್ 30 ರವರೆಗೆ ನಿಷೇಧಿಸಿತ್ತು.
ನಗರದಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಧೂಳನ್ನು ಹಿಡಿದಿಡಲು ದೆಹಲಿ ಅಗ್ನಿಶಾಮಕ ದಳ ಕಳೆದ 36 ದಿನಗಳಲ್ಲಿ 13 ಮಾಲಿನ್ಯ ಹಾಟ್‌ಸ್ಪಾಟ್‌ಗಳಲ್ಲಿ 70 ಲಕ್ಷ ಲೀಟರ್ ನೀರನ್ನು ಸಿಂಪಡಿಸಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.